ರಾಷ್ಟ್ರೀಯ ಹೆದ್ದಾರಿ-209 ರ ನ್ಯೂನತೆ ಸರಿ ಪಡಿಸಲು ಹೆದ್ದಾರಿ ಪ್ರಾಧಿಕಾರ ಸಮ್ಮತಿ: ನರೇಂದ್ರಸ್ವಾಮಿ

| Published : Apr 23 2025, 12:40 AM IST

ರಾಷ್ಟ್ರೀಯ ಹೆದ್ದಾರಿ-209 ರ ನ್ಯೂನತೆ ಸರಿ ಪಡಿಸಲು ಹೆದ್ದಾರಿ ಪ್ರಾಧಿಕಾರ ಸಮ್ಮತಿ: ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆದ್ದಾರಿಯ ಪ್ರಮುಖ ವೃತ್ತಗಳ ಅಭಿವೃದ್ಧಿ ಹಾಗೂ ಜನವಸತಿ ಪ್ರದೇಶಗಳ ಬಳಿ ನಿರ್ಮಾಣವಾಗಬೇಕಿರುವ ರಸ್ತೆ ಉಬ್ಬು, ವಿದ್ಯುತ್ ದೀಪಗಳ ಆಳವಡಿಕೆ ಮತ್ತು ಕೆಳಸೇತುವೆ ನಿರ್ಮಾಣ ಸೇರಿದಂತೆ ಹಲವು ಆಗತ್ಯ ಕಾಮಗಾರಿಗಳ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿದ್ದು, ಇಂದಿನಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನಲ್ಲಿ ಹಾದು ಹೋಗುವ ಬೆಂಗಳೂರು- ದಿಂಡಿಗಲ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ -209ರ ನಿರ್ಮಾಣ ಹಂತದ ನ್ಯೂನತೆಗಳನ್ನು ಹಂತ ಹಂತವಾಗಿ ಸರಿಪಡಿಸಲು ಹೆದ್ದಾರಿ ಪ್ರಾಧಿಕಾರ ಸಮ್ಮತಿಸಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 15 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ -209 ರ ನಿರ್ಮಾಣ ಕೈಗೆತ್ತಿಕೊಂಡಿದ್ದು, ಸದರಿ ರಸ್ತೆಯ ಯೋಜನಾ ವರದಿ ಪ್ರಸ್ತುತ ಅವಧಿಯಲ್ಲಿ ವಾಹನ ದಟ್ಟಣೆಯಿಂದ ಅಡಚಣೆಯಾಗಿದೆ ಎಂದರು.

ಹೆದ್ದಾರಿಯ ಪ್ರಮುಖ ವೃತ್ತಗಳ ಅಭಿವೃದ್ಧಿ ಹಾಗೂ ಜನವಸತಿ ಪ್ರದೇಶಗಳ ಬಳಿ ನಿರ್ಮಾಣವಾಗಬೇಕಿರುವ ರಸ್ತೆ ಉಬ್ಬು, ವಿದ್ಯುತ್ ದೀಪಗಳ ಆಳವಡಿಕೆ ಮತ್ತು ಕೆಳಸೇತುವೆ ನಿರ್ಮಾಣ ಸೇರಿದಂತೆ ಹಲವು ಆಗತ್ಯ ಕಾಮಗಾರಿಗಳ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿದ್ದು, ಇಂದಿನಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿದೆ ಎಂದರು.

ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಅಪಘಾತ, ಜೀವಹಾನಿ ಮುಂತಾದ ಅನಾನುಕೂಲತೆ ಬಗ್ಗೆ ಸಾರ್ವಜನಿಕರು, ಸಂಘ ಸಂಸ್ಥೆ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮುಖ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಪತ್ರ ಬರೆಯಲಾಗಿತ್ತು ಎಂದರು.

ಪತ್ರದ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿಗಳು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ರಾಷ್ಟ್ರೀಯಯ ಹೆದ್ದಾರಿ ಪ್ರಾಧೀಕಾರದ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ತುರ್ತು ಆಗತ್ಯ ಕಾಮಗಾರಿಗಳ ಪಟ್ಟಿಮಾಡಿ ಅನಾನುಕೂಲತೆ ತಪ್ಪಿಸಲು ಆಗತ್ಯ ಕಾಮಗಾರಿ ನಿರ್ವಹಿಸಲು ಒತ್ತಡ ಹೇರಲಾಗಿತ್ತು ಎಂದರು.

ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಭೆ ಫಲಶೃತಿಯಾಗಿ ರಾಷ್ಟ್ರೀಯ ಹೆದ್ದಾರಿ ನಿಯಮಾವಳಿ ಪ್ರಕಾರ ಜಂಕ್ಷನ್ ಅಭಿವೃದ್ಧಿ, ಸಿಗ್ನಲ್ ದೀಪ ಮತ್ತು ನಾಮಫಲಕ ಅಳವಡಿಕೆ, ಹಂಪ್ಸ್ ನಿರ್ಮಾಣ ಮತ್ತು ಕೆಳ ಸೇತುವೆ ನಿರ್ಮಾಣವನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳುವ ಲಿಖಿತ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಸಹಮತ ವ್ಯಕ್ತಪಡಿಸಲಾಗಿದೆ ಎಂದರು.

ಚತುಷ್ಪಥ ರಸ್ತೆ ನಿರ್ಮಾಣ:

ಭವಿಷ್ಯದಲ್ಲಿ ಎದುರಾಗುವ ಸಂಚಾರ ದಟ್ಟಣೆ ನಿಯಂತ್ರಿಸಲು ಸದರಿ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತಿಸುವ ಸಂಬಂಧ ನೂತನ ಕ್ರಿಯಾ ಯೋಜನೆ ರೂಪಿಸಿ ಆಗತ್ಯ ಕ್ರಮ ಕೈಗೊಳ್ಳುವ ಭರವಸೆ ಅಧಿಕಾರಗಳಿಂದ ವ್ಯಕ್ತವಾಗಿತ್ತು. ಈ ಕಾರಣದಿಂದ ರಸ್ತೆ ವ್ಯಾಪ್ತಿಯಲ್ಲಿ ಟೋಲ್ ಸಂಗ್ರಹಕ್ಕೆ ಹಾಕಿದ್ದ ಷರತ್ತುಗಳನ್ನು ಸಡಿಲಿಸಲಾಗಿದೆ ಎಂದರು.

ಸುಂಕ ವಸೂಲಾತಿ ನಿಲ್ದಾಣಕ್ಕೆ ಸತ್ತೇಗಾಲ ಪ್ರೀ ಪ್ಲಾಜಾ ಎಂಬ ಹೆಸರನ್ನು ನಾಮಕರಣಗೊಳಿಸಲಾಗಿತ್ತು. ಅದನ್ನು ಬದಲಾಯಿಸಿ ತಾಲೂಕಿನ ಐತಿಹಾಸಿಕ ಪ್ರವಾಸಿ ತಾಣವಾಗಿರುವ ಗಗನಚುಕ್ಕಿ ಪ್ರೀ ಪ್ಲಾಜಾ ಹೆಸರನ್ನು ಬದಲಾಯಿಸಲಾಗಿದೆ ಎಂದರು.