ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ ಕೇಸರಿ ಶಾಲಿಗೆ ನಿರ್ಬಂಧಿಸುವ ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರವು ತಕ್ಷಣ ಹಿಂಪಡೆಯಬೇಕೆಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ ಕೇಸರಿ ಶಾಲಿಗೆ ನಿರ್ಬಂಧಿಸುವ ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರವು ತಕ್ಷಣ ಹಿಂಪಡೆಯಬೇಕೆಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.ಸಮಿತಿಯ ಪ್ರಮುಖರ ಹಾಗೂ ತಾಲೂಕಿನ ಹಿರಿಯರ ನಿಯೋಗವು ಸಮಿತಿಯ ಮುಖ್ಯಸ್ಥರಾದ ವಿಠೋಬಾ ಮಾಳ್ಸೇಕರ ಮುಂದಾಳತ್ವದಲ್ಲಿ ತಾಲೂಕಾಡಳಿತ ಸೌಧಕ್ಕೆ ತೆರಳಿ ಗ್ರೇಡ್-2 ತಹಸೀಲ್ದಾರ ರವೀಂದ್ರ ನೇಸರಗಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ರಾಜ್ಯ ಸರ್ಕಾರವು ಕೈಗೊಂಡಿರುವ ಈ ನಿರ್ಣಯವು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಗಂಭೀರ ಚರ್ಚೆ ಹುಟ್ಟು ಹಾಕಿದೆ. ಇದು ಸಮಾನತೆ, ಧರ್ಮನಿರಪೇಕ್ಷತೆ ಹಾಗೂ ಏಕರೂಪದ ಸಮವಸ್ತ್ರ ನೀತಿಗೆ ವಿರುದ್ಧವಾಗಿದೆ. ಈ ಪ್ರಕರಣವು ದೇಶದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ. ಹೀಗಿರುವಾಗ ರಾಜ್ಯ ಸರ್ಕಾರವು ಏಕಪಕ್ಷೀಯವಾಗಿ ಹಿಜಾಬ್ ಧರಿಸಲು ಅವಕಾಶ ನೀಡುವ ಮೂಲಕ ನ್ಯಾಯಾಂಗದ ಪ್ರಕ್ರಿಯೆ ಹಾಗೂ ಹಿಂದಿನ ತೀರ್ಪಿನ ವಿರುದ್ಧವಾಗಿದೆ ಎಂಬ ಭಾವನೆಯು ಸಮಾಜದಲ್ಲಿ ಮೂಡುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಒಂದು ಸಮುದಾಯದ ಧಾರ್ಮಿಕ ಚಿಹ್ನೆಗೆ ಅವಕಾಶ ನೀಡಿ, ಇನ್ನೊಂದು ಸಮುದಾಯದ ಪ್ರತಿಕ್ರಿಯಾತ್ಮಕ ಅಭಿವ್ಯಕ್ತಿಗೆ ನಿರ್ಬಂಧ ಹೇರುವುದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ನಿಯಮ ಅನ್ವಯಿಸುವ ಮೂಲಕ ಧರ್ಮನಿರಪೇಕ್ಷತೆ ಕಾಪಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ವೇಳೆ ಗಜಾನನ ಪಾಲ್ಕರ, ಶಿವಾನಂದ ಶೆಟ್ಟರ, ರಾಘವೇಂದ್ರ ಛಲವಾದಿ, ಅಭಿನಂದನ ಮಸೂರಕರ, ಶಂಕರ ರೇಣಕೆ, ವಿನೋದ ಘಿಂಡೇ, ಮಂಜುನಾಥ ಘಾಡಿ, ಜಿ.ಟಿ. ಗಂಗಾಧರ, ಎಸ್.ಎಸ್. ಗೋಕಾವಿ, ರಾಜು ವಿ., ವಿ.ಕೆ. ಸಾವಂತ, ಆರ್.ಬಿ. ಛಲವಾದಿ, ಶಿವಾನಂದ, ಸದಾನಂದ ಬಾಳೆಕುಂದ್ರಿ ಹಾಗೂ ಇತರರಿದ್ದರು.