ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪುತ್ತೂರು ನಗರದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ಗುಡ್ಡ ಕುಸಿತಗೊಂಡಿದ್ದು, ಕೆಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಡಕುಂಟಾಗಿದೆ. ಬೆಳ್ಳಿಪ್ಪಾಡಿ ಎಂಬಲ್ಲಿ ಭೂ ಕುಸಿತ ಉಂಟಾಗಿ ೩ ಮನೆಗಳಿಗೆ ಹಾನಿಯಾಗಿದೆ. ಬನ್ನೂರಿನ ಬೇರಿಕೆ ಎಂಬಲ್ಲಿ ಗುಡ್ಡವೊಂದು ರಸ್ತೆಗೆ ಕುಸಿದಿದ್ದು ಇಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಗುಡ್ಡೆ ಕುಸಿತ ರಾಷ್ಟ್ರೀಯ ಹೆದ್ದಾರಿ ಬಂದ್: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ತೆಂಕಿಲ ಬಪ್ಪಳಿಗೆ ಬೈಪಾಸ್‌ನಲ್ಲಿ ಎಂಬಲ್ಲಿ ರಸ್ತೆ ಪಕ್ಕದಲ್ಲಿನ ಗುಡ್ಡ ಶುಕ್ರವಾರ ಮುಂಜಾನೆ ಕುಸಿದುಬಿದ್ದಿದೆ. ಈ ಹೆದ್ದಾರಿ ಸಂಚಾರ ಬಂದ್ ಮಾಡಿ ಮಣ್ಣು ತೆರವು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರಗಳಿಲ್ಲದ ಕಾರಣ ಸಂಭಾವ್ಯ ಅಪಾಯ ತಪ್ಪಿದಂತಾಗಿದೆ. ಮಣ್ಣು ತೆರವುಗೊಳಿಸುವ ಕಾರ್ಯ ತ್ವರಿತವಾಗಿ ನಡೆಸಲಾಗುತ್ತಿದೆ. ರಸ್ತೆಯಲ್ಲಿ ನಿಂತ ಕೆಸರು ನೀರನ್ನು ಟ್ಯಾಂಕರ್ ನೀರು ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಗುಡ್ಡ ಕುಸಿತದಿಂದ ಗುಡ್ದದ ಮೇಲಿರುವ ದೇವಿ ದೇವಸ್ಥಾನ ಹಾಗೂ ಕೆಲವು ಮನೆಗಳಿಗೆ ಅಪಾಯ ಎದುರಾಗಿದೆ. ಈ ರಸ್ತೆಯಲ್ಲಿ ಮಂಗಳೂರಿನಿಂದ ಮಡಿಕೇರಿ, ಮೈಸೂರು ಭಾಗಗಳಿಗೆ ಪ್ರಯಾಣಿಸುವವರಿಗೆ ಬದಲಿ ರಸ್ತೆಯಾಗಿ ಪುತ್ತೂರು ಸಿಟಿಯ ಒಳಗಡೆ ಸಂಚಾರ ವ್ಯವಸ್ಥೆ ಮಾಡಲಾಯಿತು.ಘಟನಾ ಸ್ಥಳಕ್ಕೆ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು ಹೆದ್ದಾರಿಯಲ್ಲಿನ ಮಣ್ಣು ಮತ್ತು ಕೆಸರು ನೀರನ್ನು ತೆರವುಗೊಳಿಸಿದ ಬಳಿಕ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆದರೆ ಇಲ್ಲಿನ ಗುಡ್ಡ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿ ಗುಡ್ಡದ ಬದಿಯಲ್ಲಿ ಅರ್ಧರಸ್ತೆಯನ್ನು ಬಂದ್ ಮಾಡಿ ರಸ್ತೆಯ ಅರ್ಧಭಾಗವನ್ನು ಮಾತ್ರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮತ್ತೆರಡು ದಿನಗಳ ಕಾಲ ಮಳೆ ಮತ್ತು ಗಾಳಿ ಸಾಧ್ಯತೆ ಕಂಡುಬಂದಿದ್ದು, ಜನರು ಹೆಚ್ಚು ಎಚ್ಚರಿಕೆ ವಹಿಸಬೇಕು ತಿಳಿಸಿದ್ದಾರೆ.
ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿ ಎಂಬಲ್ಲಿ ಭಾರೀ ಭೂ ಕುಸಿತ ಉಂಟಾಗಿದ್ದು, ೩ ಮನೆಗಳು ಹಾಗೂ ೨ ಹಟ್ಟಿಗಳಿಗೆ ಹಾನಿಯಾಗಿದೆ. ೩ ದನಗಳು ಹಾಗೂ ೩ ಕರುಗಳು ಸಾವಿಗೀಡಾಗಿವೆ. ಅಂದ್ರಿಗೇರಿಯ ಗಂಗಯ್ಯ ಗೌಡ ಅವರ ಮನೆಯ ಹಟ್ಟಿಗೆ ಗುಡ್ಡ ಕುಸಿದು ಬಿದ್ದ ಕಾರಣ ೨ ದನಗಳು ಹಾಗೂ ೨ ಕರುಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದೆ. ಜೊತೆಗೆ ಮನೆಗೂ ಭಾಗಶಃ ಹಾನಿಯಾಗಿದೆ. ಪಕ್ಕದಲ್ಲಿನ ಯಶೋದಾ ಎಂಬವರ ಹಟ್ಟಿಗೂ ಗುಡ್ಡ ಕುಸಿದುಬಿದ್ದ ಕಾರಣ ಅವರ ಹಟ್ಟಿಯಲ್ಲಿದ್ದ ೧ ದನ ಹಾಗೂ ೧ ಕರು ಮೃತಪಟ್ಟಿದೆ. ಹಟ್ಟಿಯ ಪಕ್ಕದಲ್ಲಿಯೇ ಇರುವ ಅವರ ಮನೆಗೂ ಭಾಗಶಃ ಹಾನಿಯಾಗಿದೆ. ಇಲ್ಲಿನ ವಿಶ್ವನಾಥ ಪೂಜಾರಿ ಎಂಬವರ ಮನೆಗೂ ಗುಡ್ಡ ಕುಸಿತದಿಂದ ಹಾನಿ ಉಂಟಾಗಿದೆ.ಬೇರಿಕೆ, ಪಾಣಂಬುವಿನಲ್ಲಿ ಗುಡ್ಡಕುಸಿತ: ಬನ್ನೂರು ಗ್ರಾಮದ ಬೇರಿಕೆ ಎಂಬಲ್ಲಿ ಬೃಹತ್ ಗುಡ್ಡವೊಂದು ಕುಸಿದಿದ್ದು, ಇಲ್ಲಿನ ಮುರ- ಕಡಂಬು ಸಂಪರ್ಕ ರಸ್ತೆಯು ಸುಮಾರು ೨೦೦ ಮೀ ರಸ್ತೆ ಮಣ್ಣಿನಿಂದ ಮುಚ್ಚಿ ಹೋಗಿದೆ. ಈ ರಸ್ತೆಯನ್ನು ಕಳೆದ ೨ ವರ್ಷಗಳ ಹಿಂದೆ ಅಭಿವೃದ್ಧಿಗೊಳಿಸಲಾಗಿತ್ತು. ಇದೀಗ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಗುಡ್ಡ ಕುಸಿದುಬಿದ್ದು ರಸ್ತೆ ಸಂಪೂರ್ಣ ಸಂಪರ್ಕ ಕಡಿದುಗೊಂಡಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಭೇಟಿ ನೀಡಿದರು. ಈ ಗುಡ್ಡ ಕುಸಿತದ ಭಾಗದಲ್ಲಿ ೪ ಮನೆಗಳಿದ್ದು, ಈ ಕುಟುಂಬಗಳನ್ನು ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ.
ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಪಾಣಂಬು ಎಂಬಲ್ಲಿ ಗುಡ್ಡ ಕುಸಿತವಾಗಿ ಮನೆಗೆ ಹಾನಿಯಾಗಿದೆ. ಇಲ್ಲಿನ ತುಂಗಮ್ಮ ರಮೇಶ್ ಎಂಬವರ ವಾಸ್ತವ್ಯದ ಮನೆಯ ಹಿಂಭಾಗದ ಗುಡ್ಡ ಶುಕ್ರವಾರ ರಾತ್ರಿ ಕುಸಿದು ಮನೆಯ ಗೋಡೆ ಕುಸಿದು ಬಿದ್ದಿದ್ದು ಹಾನಿಯಾಗಿದೆ.ಪ್ರಾಕೃತಿಕ ವಿಕೋಪಕ್ಕೆ ಪರಿಹಾರ: ಪುತ್ತೂರು ತಾಲೂಕಿನಲ್ಲಿ ಜುಲೈ ಅಂತ್ಯದ ತನಕ ಪ್ರಾಕೃತಿಕ ವಿಕೋಪದಿಂದ ಒಟ್ಟು ೮ ಮನೆಗಳಿಗೆ ತೀವ್ರಹಾನಿ ಉಂಟಾಗಿದೆ. ಈ ಮನೆಗಳಿಗೆ ತಲಾ ೧.೨೦ ಲಕ್ಷದಂತೆ ಒಟ್ಟು ೯.೬೦ ಲಕ್ಷ, ೧೮ ಭಾಗಶಃ; ಹಾನಿ ಪ್ರಕರಣದಲ್ಲಿ ತಲಾ ೬೫೦೦ರಂತೆ ಒಟ್ಟು ೧.೧೭ಲಕ್ಷ, ದನ ಜೀವಹಾನಿಗೆ ೩೭೫೦೦ ರು. ಹಾಗೂ ಕರು ಜೀವಹಾನಿಗೆ ೨೦ಸಾವಿರ ರು., ದನದ ಹಟ್ಟಿ ಹಾನಿ ೩ ಪ್ರಕರಣಕ್ಕೆ ೯ ಸಾವಿರ ರು. ವಿತರಣೆ ಮಾಡಲಾಗಿದೆ ಎಂದು ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.