ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾದ ಮತ್ತು ನೆರೆ ಪೀಡಿತ ನೇತ್ರಾವತಿ ನದಿ ತೀರದ ತಗ್ಗು ಪ್ರದೇಶಗಳಾದ ಅಮ್ಮುಂಜೆ, ಗೂಡಿನಬಳಿ ಆಲಡ್ಕ, ಕೆಳಗಿನಪೇಟೆ, ನಾವೂರ, ಅನೇಜ ತಿರುವು, ಅಜಿಲಮೊಗರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆ ಆಲಿಸಿದರು.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಆಯುಕ್ತ ಹರ್ಷವರ್ಧನ್, ತಹಸೀಲ್ದಾರ್ ಅರ್ಚನಾ ಭಟ್, ತಾ.ಪಂ. ಇಒ ಸಚಿನ್ ಕುಮಾರ್ ಸಚಿವರಿಗೆ ಸಾಥ್ ನೀಡಿ ಪೂರಕ ಮಾಹಿತಿ ಒದಗಿಸಿದರು.ಬಳಿಕ ಮಾಧ್ಯಮವರ ಜೊತೆ ಮಾತನಾಡಿದ ಸಚಿವರು, ನೆರೆಯಿಂದ ಮಳುಗಡೆಯಾದ ಆಲಡ್ಕದ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಆಗುತ್ತದೆ. ಸಂತ್ರಸ್ತರು ವಾಸವಾಗಿರುವ ಜಾಗದ ಮೇಲೆ ಕುಮ್ಕಿ ಜಾಗವೆಂದು ಕೇಸು ದಾಖಲಾಗಿದ್ದು, ಪ್ರಕರಣ ಜಿಲ್ಲಾಧಿಕಾರಿ ಮುಂದೆ ಇದೆ. ಆದಷ್ಟು ಬೇಗ ಜಾಗದ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಜಮೀನು ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ ಎಂದರು.
ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆಯನ್ನು ಕಳೆದುಕೊಂಡವಂತಹ ಸಂತ್ರಸ್ತರಿಗೆ 1.25 ಲಕ್ಷ ರು. ಸಹಾಯಧನದ ಜೊತೆ ಸರ್ಕಾರದ ಮನೆ ಕಟ್ಟುವ ಬೇರೆ ಬೇರೆ ಯೋಜನೆಗಳನ್ನು ಸೇರಿಸಿಕೊಂಡು ಸಂಪೂರ್ಣ ಮನೆಯಾಗಿರುವವರಿಗೆ 5 ಲಕ್ಷ ರು. ಸಹಾಯಧನವನ್ನು ನೀಡುವ ಬಗ್ಗೆ ಸರ್ಕಾರದಿಂದ ಅದೇಶ ಮಾಡಲಾಗಿದೆ. ಭಾಗಶಃ ಹಾನಿಯಾದ ಮನೆಗಳಿಗೆ 6.500 ಸಾವಿರದಿಂದ 50 ಸಾವಿರದ ವರೆಗೆ ಏರಿಸುವ ಬಗ್ಗೆ ಈಗಾಗಲೇ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.ವ್ಯವಸ್ಥೆ ಕಲ್ಪಿಸಲು ಆಗ್ರಹ: ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಆಲಡ್ಕದಲ್ಲಿ ಸಂತ್ರಸ್ತರು ಶಾಶ್ವತವಾದ ಪರಿಹಾರಕ್ಕೆ ಒತ್ತಾಯ ಮಾಡಿದರು. ಪ್ರತಿ ವರ್ಷ ನೆರೆಯ ಸಮಸ್ಯೆ ಅನುಭವಿಸುತ್ತಿದ್ದೇವೆ. ಆದರೆ ಈವರೆಗೆ ನಮಗೆ ಶಾಶ್ವತವಾದ ಪರಿಹಾರ ಸಿಕ್ಕಿಲ್ಲ. ಬೇರೆ ಜಾಗ ಗುರುತಿಸಿ, ಮನೆ ನಿರ್ಮಿಸಿಕೊಡುವಂತೆ ಇಲ್ಲಿನ ಸಂತ್ರಸ್ತ ಕುಟುಂಬಗಳು ಸಚಿವರಲ್ಲಿ ಮನವಿ ಮಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಕಾರ್ಪೋರೆಟರ್ ವಿನಯರಾಜ್, ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಪ್ರಮುಖರಾದ ಸುದರ್ಶನ್ ಜೈನ್ ಪಂಜಿಕಲ್ಲು, ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಪೊಲೀಸ್ ಇನ್‌ಸ್ಪೆಪೆಕ್ಟರ್‌ಗಳಾದ ಅನಂತಪದ್ಮನಾಭ, ಶಿವಕುಮಾರ್, ಕಂದಾಯ ನಿರೀಕ್ಷಕರಾದ ವಿಜಯ್ ಮತ್ತಿತರರಿದ್ದರು.