ಸಾರಾಂಶ
ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಖಮಲೆ ಎಂಬಲ್ಲಿ ರಸ್ತೆ ಪಕ್ಕದ ತಡೆಗೋಡೆ ಬಿರುಕು ಬಿಟ್ಟಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ಶಿಂಗಾಣಿ ಎಂಬಲ್ಲಿ ಧರೆ ಕುಸಿತಗೊಳ್ಳುತ್ತಿದ್ದು, ಇಲ್ಲಿನ ಗುಡ್ಡ ಪ್ರದೇಶದಲ್ಲಿರುವ ಮನೆಗಳು ಅಪಾಯದ ಸ್ಥಿಯಲ್ಲಿದೆ. ಶಿಂಗಾಣಿಯ ಎತ್ತರ ಪ್ರದೇಶದಲ್ಲಿ ಹಲವು ಮನೆಗಳಿವೆ. ಮನೆಗಳ ಪಕ್ಕದ ಧರೆಯು ಗುರುವಾರ ಕುಸಿಯಲು ಆರಂಭಿಸಿದೆ. ಇದರಿಂದ ಇಲ್ಲಿನ ಮನೆಗಳ ನಿವಾಸಿಗಳು ಆತಂಕಗೊಂಡಿದ್ದಾರೆ. ಮಣ್ಣು ಕುಸಿದ ಜಾಗಕ್ಕೆ ಟಾರ್ಪಾಲು ಹೊದಿಸಲಾಗಿದೆ.
ಈ ಪ್ರದೇಶಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಖಮಲೆ ಎಂಬಲ್ಲಿ ರಸ್ತೆ ಪಕ್ಕದ ತಡೆಗೋಡೆ ಬಿರುಕು ಬಿಟ್ಟಿದೆ. ಶೇಖಮಲೆಯಲ್ಲಿ ದರ್ಬೆತ್ತಡ್ಕಕ್ಕೆ ಕವಲೊಡೆಯುವ ರಸ್ತೆಯ ಪಕ್ಕದಲ್ಲಿ ತಡೆಗೋಡೆಯಿದ್ದು, ಅದರ ಬುಡದಲ್ಲೇ ಬಿರುಕು ಕಾಣಿಸಿಕೊಂಡಿದೆ. ತಡೆಗೋಡೆಯ ಮತ್ತೊಂದು ಭಾಗದಲ್ಲಿ ಮನೆಯಿದ್ದು, ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಪುತ್ತೂರು- ಪಾಣಾಜೆ ಸಂಪರ್ಕದ ಚೆಲ್ಯಡ್ಕ ಸೇತುವೆ ಮುಳುಗಡೆಪುತ್ತೂರು: ಪುತ್ತೂರು- ಪಾಣಾಜೆ ಸಂಪರ್ಕದ ಮುಳುಗು ಸೇತುವೆ ಎಂದೇ ಪ್ರಚಲಿತವಾಗಿರುವ ಒಳಮೊಗ್ರು ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆಯು ಗುರುವಾರ ಬೆಳಗ್ಗಿನಿಂದ ಮುಳುಗಡೆಯಾಗಿದೆ.ಈ ಭಾಗದಲ್ಲಿ ಸಂಚರಿಸುವ ಬಸ್ ಮತ್ತು ಇತರ ವಾಹನಗಳು ಪುತ್ತೂರು- ಸಂಟ್ಯಾರ್- ರೆಂಜ ಮೂಲಕ ಪಾಣಾಜೆಗೆ ಸುತ್ತು ಬಳಸಿ ತೆರಳುತ್ತಿವೆ. ಪ್ರತಿ ಮಳೆಗಾಲದಲ್ಲಿಯೂ ಈ ಸೇತುವೆಯು ಕನಿಷ್ಠ ಏಳೆಂಟು ಬಾರಿ ಮುಳುಗಡೆಯಾಗುತ್ತಿದೆ.ಇಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಮುಳುಗು ಸೇತುವೆಯಿದ್ದು, ಇದನ್ನು ತೆರವುಗೊಳಿಸಿ ಹೊಸ ಸೇತುವೆ ಮಾಡುವಂತೆ ಈ ಭಾಗದ ಜನರು ಕಳೆದ ಹಲವಾರು ವರ್ಷಗಳಿಂದಲೂ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಈ ತನಕ ಸೇತುವೆ ನಿರ್ಮಾಣಗೊಂಡಿಲ್ಲ. ಪ್ರಸ್ತುತ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ ಎನ್ನಲಾಗುತ್ತಿದೆ. ಆದರೆ ಸೇತುವೆ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ. ಇದರಿಂದಾಗಿ ಮಳೆಯ ಆರಂಭದಲ್ಲಿಯೇ ಈ ಭಾಗದ ಜನರು ರಸ್ತ ಸಂಚಾರ ಸ್ಥಗಿತಗೊಂಡು ಸಂಕಷ್ಟ ಅನುಭವಿಸುವಂತಾಗಿದೆ.