ಬೆದ್ರಾಳ ತೋಡಿಗೆ ಗುಡ್ಡ ಮಣ್ಣು ಕುಸಿತ: ತೋಟಗಳು ಜಲಾವೃತ

| Published : Aug 04 2024, 01:24 AM IST

ಸಾರಾಂಶ

ತೋಡಿಗೆ ಬಿದ್ದ ಮಣ್ಣು ತೆರವು ಮಾಡಲು ಜೆಸಿಬಿ ಹೋಗಲೂ ದಾರಿಯೂ ಇಲ್ಲ. ಮಾನವ ಶ್ರಮವೂ ಇಲ್ಲಿ ಅಸಾಧ್ಯದ ಪರಿಸ್ಥಿತಿಯಾಗಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ಪೇಟೆಯೊಳಗಿನ ರಾಜಕಾಲುವೆ ಸಹಿತ ಹಲವು ಉಪ ತೋಡುಗಳ ನೀರು ಹರಿಯುತ್ತಿರುವ ಬೆದ್ರಾಳ ತೋಡಿಗೆ ಶನಿವಾರ ನಸುಕಿನ ಜಾವ ಪಕ್ಕದಲ್ಲಿನ ಗುಡ್ಡ ಕುಸಿದು ಪಕ್ಕದ ಅಡಕೆ ತೋಟಗಳು ಜಲಾವೃತಗೊಂಡಿದ್ದು, ಮನೆಯೊಂದು ಅಪಾಯದ ಅಂಚಿನಲ್ಲಿದೆ.

ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆ ಬೈಲು ಎಂಬಲ್ಲಿ ಬೆದ್ರಾಳ ತೋಡಿಗೆ ಭಾರಿ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದು ಬಿದ್ದು ತೋಡಿನಲ್ಲಿ ಮಳೆ ನೀರು ಹರಿಯುವಿಕೆಗೆ ಅಡ್ಡಿಯಾಗಿ ಪಕ್ಕದಲ್ಲಿರುವ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಸಚಿನ್ ಹಾಗೂ ಮುತ್ತು ಶೆಟ್ಟಿ ಎಂಬವರಿಗೆ ಸೇರಿದ ಅಡಕೆ ತೋಟಗಳಿಗೆ ನೀರು ನುಗ್ಗಿ ತೋಟಗಳು ಜಲಾವೃತಗೊಂಡಿದೆ.

ತೋಡಿನ ಬದಿಯಲ್ಲಿರುವ ಯಶೋಧರಾ ಎಂಬವರ ಮನೆ ಅಪಾಯದಂಚಿನಲ್ಲಿದೆ. ಸ್ಥಳಕ್ಕೆ ನಗರಸಭಾ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್. ಮನೋಹರ್ ಮತ್ತು ನಗರಸಭೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.ಭಾರಿ ಪ್ರಮಾಣದ ಗುಡ್ಡದ ಮಣ್ಣು ಕುಸಿದ ಪರಿಣಾಮ ಬೆದ್ರಾಳ ತೋಡು ಮುಚ್ಚಿಹೋಗಿದೆ. ತುಂಬಿ ಹರಿಯುವ ತೋಡಿನಲ್ಲಿ ಹರಿಯುವ ಮಳೆ ನೀರು ತನ್ನ ದಿಕ್ಕು ಬದಲಾಯಿಸಿ ಪಕ್ಕದ ತೋಟಗಳಿಗೆ ನೀರು ನುಗ್ಗಿದೆ. ತೋಡಿಗೆ ಬಿದ್ದ ಮಣ್ಣು ತೆರವು ಮಾಡಲು ಜೆಸಿಬಿ ಹೋಗಲೂ ದಾರಿಯೂ ಇಲ್ಲ. ಮಾನವ ಶ್ರಮವೂ ಇಲ್ಲಿ ಅಸಾಧ್ಯದ ಪರಿಸ್ಥಿತಿಯಾಗಿದೆ.