ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗಿನ ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಶ್ರೀಸ್ವಾಮಿ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಭಾನುವಾರ ಜರುಗಿತು.ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹಾಗೂ ಸ್ಥಳೀಯ ಭಕ್ತಾದಿಗಳು ಭಾನುವಾರ ಬೆಳಗ್ಗೆಯಿಂದಲೇ ಬೆಟ್ಟಕ್ಕೆ ಬಿಸಿಲಿನ ನಡುವೆಯೂ ಜಮಾಯಿಸಿ ಗೋಪಾಲಸ್ವಾಮಿ ಹೊತ್ತ ತೇರು ಎಳೆದು ಪುನೀತರಾದರು.
ಗೋಪಾಲಸ್ವಾಮಿ ಬೆಟ್ಟದ ತಪ್ಪಲು ಪ್ರದೇಶಕ್ಕೆ ಗುಂಡ್ಲುಪೇಟೆಯಿಂದ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಬಂದ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳ ನಂತರ ಹಿಮವದ್ ಗೋಪಾಲಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ದೇವಾಲಯದ ಸುತ್ತಲೂ ಗೋವಿಂದ, ಗೋಪಾಲ ಎಂಬ ಭಕ್ತರ ಜೈಕಾರದೊಂದಿಗೆ ಪ್ರದಕ್ಷಿಣೆ ಹಾಕಿಸಲಾಯಿತು.
ದೇವಾಲಯದ ಉತ್ತರ ಪಾರ್ಶ್ವದಲ್ಲಿನ ಹಸಿರು ಚಪ್ಪರದಡಿ ಇರಿಸಿ ಪೂಜೆ ಸಲ್ಲಿಸಿದ ಬಳಿಕ ಕಾಡಿನಿಂದ ತಂದಿದ್ದ ಪಣತಾರು(ಕುಚ್ಚು) ವಿವಿಧ ಬಗೆಯ ಫಲಪುಷ್ಪಗಳಿಂದ ಶೃಂಗಾರಗೊಂಡ ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ನಿಲ್ಲಿಸಿದ್ದ ರಥದಲ್ಲಿ ಉತ್ಸವ ಮೂರ್ತಿ ಇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಕೆ.ವಿ.ಗೋಪಾಲಕೃಷ್ಣ ಭಟ್ ಮಹಾ ಮಂಗಳಾರತಿ ನೆರವೇರಿಸಿದ ಬಳಿಕ ತಹಸೀಲ್ದಾರ್ ಎಂ.ಎಸ್.ತನ್ಮಯ್ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತರು ಗೋವಿಂದ...ಗೋವಿಂದ, ಗೋಪಾಲ...ಗೋಪಾಲ ಎಂಬ ಹರ್ಷೋದ್ಗಾರದೊಂದಿಗೆ ರಥವನ್ನು ಎಳೆದು ಸಾಗುವಾಗ ದೇವಾಲಯದ ಹೊರ ಆವರಣದ ಎರಡು ಕಡೆ ನಿಂತಿದ್ದ ಅಸಂಖ್ಯಾತ ಭಕ್ತರು ರಥೋತ್ಸವಕ್ಕೆ ನಮಿಸಿ, ಹಣ್ಣು- ಧವನ ಎಸೆದು ಇಷ್ಟಾರ್ಥಗಳ ಸಿದ್ಧಿಗೆ ಪ್ರಾರ್ಥಿಸಿದರು.ತೇರು ದೇವಸ್ಥಾನದ ಒಂದು ಸುತ್ತು ಪ್ರದಕ್ಷಿಣೆ ನಂತರ ಮೂಲ ಸ್ಥಾನದಲ್ಲಿ ರಥೋತ್ಸವ ಕೊನೆಗೊಂಡಿತು.
ಪ್ರತಿ ವರ್ಷದಂತೆ ಗೋಪಾಲಪುರ, ಕಣ್ಣೇಗಾಲ, ದೇವರಹಳ್ಳಿ ಹಾಗೂ ಹೊನ್ನೇಗೌಡನಹಳ್ಳಿ ಗ್ರಾಮದವರು (ತೇರು ಬಿಟ್ಟಿ ಸಂಘ) ರಥೋತ್ಸವ ಯಶಸ್ವಿಗೊಳಿಸಿದರು.ತೀವ್ರ ನಿಗಾ: ಬೇಸಿಗೆ ಕಾಲವಾದ ಕಾರಣ ರಥೋತ್ಸವಕ್ಕೆ ಬರುವ ಭಕ್ತರು ಮತ್ತು ಜನಸಾಮಾನ್ಯರು ಅರಣ್ಯದೊಳಕ್ಕೆ ಪ್ರವೇಶಿಸದಂತೆ ಬ್ಯಾರಿಕೇಡ್ ಮತ್ತು ಟೇಪ್ ಕಟ್ಟಿ,ಕಾವಲು ಕಾಯುವ ಮೂಲಕ ಅರಣ್ಯ ಇಲಾಖೆ ನೌಕರರು ಮತ್ತು ಸ್ವಯಂ ಸೇವಕರು ನಿಗಾ ಇಟ್ಟಿದ್ದರು.
ಗುಂಡ್ಲುಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು.ಗೋಪಾಲಸ್ವಾಮಿ ಜಾತ್ರೆಯಂದು ಆಗಮಿಸುವ ಭಕ್ತರಿಗೆ ದಾನಿಗಳು ಮಜ್ಜಿಗೆ, ಪಾನಕ, ಉಪಾಹಾರ ವ್ಯವಸ್ಥೆ ಮಾಡಿದ್ದರು. ತಾಲೂಕಿನ ಹಂಗಳ, ಹಂಗಳದ ಸೋನಾಪುರದ ಬಸವೇಶ್ವರ ದೇವಾಲಯದವರು ಭಕ್ತರಿಗೆ ಮಜ್ಜಿಗೆ, ಪಾನಕ, ರೈಸ್‌ಬಾತ್, ಮೊಸರನ್ನ ವಿತರಿಸಿದರು. ಗೋಪಾಲಸ್ವಾಮಿ ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಭಕ್ತರು ಸಾರಿಗೆ ಬಸ್ಸಿನಲ್ಲೇ ಬೆಟ್ಟಕ್ಕೆ ತೆರಳಬೇಕಿರುವ ಕಾರಣ ಬಿಸಿಲಿನಲ್ಲಿ ಬಸ್‌ಗಾಗಿ ಕಾದು ನಿಂತ ಕಾರಣ ನಗರ ಪ್ರದೇಶದ ಭಕ್ತರು ಬಸವಳಿಸಿದರು.------
೫ಜಿಪಿಟಿ೧ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹಿಮವದ್ ಗೋಪಾಲಸ್ವಾಮಿ ರಥೋತ್ಸವ ಜರುಗಿತು.
-----ಗೋಪಾಲಸ್ವಾಮಿ ದರ್ಶನ ಪಡೆದ ಶಾಸಕ ಗಣೇಶ್ ಪ್ರಸಾದ್
ಗುಂಡ್ಲುಪೇಟೆ: ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದ ಗೋಪಾಲಸ್ವಾಮಿ ಜಾತ್ರೆಗೆ ಕ್ಷೇತ್ರದ ಶಾಸಕ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಎಚ್.ಎಂ.ಗಣೇಶ್ ಪ್ರಸಾದ್ ಭೇಟಿ ನೀಡಿ ದೇವರ ದರ್ಶನ ಪಡೆದರು.ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರೊಂದಿಗೆ ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್, ಶಾಸಕರ ಪತ್ನಿ ವಿದ್ಯಾ ಗಣೇಶ್, ಪುತ್ರ ಇಷ್ಟಾರ್ಥ್ ಪ್ರಸಾದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ಪಿ ಸ್ನೇಹರಾಜ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು, ಘಟಕ ವ್ಯವಸ್ಥಾಪಕ ಕುಮಾರ್, ಎಸಿಎಫ್ ಎನ್.ಪಿ.ನವೀನ್ ಕುಮಾರ್, ಆರ್‌ಎಫ್‌ಒಗಳಾದ ಬಿ.ಎಂ.ಮಲ್ಲೇಶ್, ಮಹದೇವ ಹಾಗೂ ಶಾಸಕರ ಬೆಂಬಲಿಗರು ಸೇರಿದಂತೆ ಸಾವಿರಾರು ಭಕ್ತರು ಜಾತ್ರೆಗೆ ಭೇಟಿ ನೀಡಿದ್ದರು.