ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರುತ್ತಿರುವುದರಿಂದಲೇ ಕನ್ನಡಿಗರು ಉದ್ಯೋಗ ಕಳೆದುಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾಹಿತಿ ಕೆ.ಪಿ.ಮೃತ್ಯುಂಜಯ ವಿಷಾದಿಸಿದರು.ನಗರದ ಡಿ.ದೇವರಾಜು ಅರಸು ಭವನದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಘಟಕ-೧ರ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣ ಚಳವಳಿ ಒಂದು ಅವಲೋಕನದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು.
ತ್ರಿಭಾಷಾ ನಡವಳಿಯನ್ನು ಕುವೆಂಪು ಅಂದೇ ವಿರೋಧಿಸಿದ್ದರು. ಆದರೆ, ಇಂದು ನಾವು ಅದನ್ನು ಅಪ್ಪಿಕೊಂಡಿದ್ದೇವೆ. ಇದರ ವಿರುದ್ಧ ಹೋರಾಟ ಮಾಡಿ ಕನ್ನಡ ಭಾಷೆ ಮಾತ್ರ ಉಳಿಯುವಂತೆ ಮಾಡಬೇಕಿದೆ. ಕರ್ನಾಟಕ ಏಕೀಕರಣದ ಚಳವಳಿ ಬಗ್ಗೆ ಮಾತನಾಡಿದ ಕುವೆಂಪು ಅವರು ಏಕಮಾತ್ರ ವ್ಯಕ್ತಿಯಾಗಿ ಕಾಣುತ್ತಾರೆ. ಆದರೆ, ಇನ್ನಾವುದೇ ರಾಜಕಾರಣಿಗಳು ನಮ್ಮ ರಾಜ್ಯದಲ್ಲಿ ಕರ್ನಾಟಕ ಏಕೀಕರಣ ಚಳವಳಿ ಬಗ್ಗೆ ಮಾತನಾಡಲಿಲ್ಲ ಎಂದು ಬೇಸರದಿಂದ ನುಡಿದರು.ಕಾವೇರಿ ಸಮಸ್ಯೆಯನ್ನು ರಾಜಕಾರಣಿಗಳು ಜೀವಂತವಿರಿಸಿ ಅದರ ಬೇಳೆ ಬೇಯಿಸಿಕೊಳ್ಳುತ್ತಿರುವಂತೆ ಕನ್ನಡ ಭಾಷೆಗೆ ಕುತ್ತು ತರುವ ಸನ್ನಿವೇಶಗಳನ್ನು ನಾವು ನೋಡುತ್ತಿದ್ದೇವೆ. ಕನ್ನಡ ಶಾಲೆಗಳನ್ನು ಮುಚ್ಚುವ ಮೂಲಕ ಕನ್ನಡ ಭಾಷೆಯನ್ನು ಕೊಲ್ಲುತ್ತಿದ್ದಾರೆ. ಇದು ಕನ್ನಡಿಗರಿಗೆ ಬಲು ದೊಡ್ಡ ಆಘಾತ ತಂದೊಡ್ಡಿದೆ. ಇದನ್ನು ಬಲವಾಗಿ ವಿರೋಧಿಸುವ ಯುವ ಮನಸುಗಳು ಹುಟ್ಟಿಕೊಳ್ಳಬೇಕು. ಜೊತೆಗೆ ಅದನ್ನು ಗಟ್ಟಿಯಾಗಿ ಹೋರಾಟ ಮಾಡುವುದು ಮುಖ್ಯವಾಗಬೇಕು ಎಂದರು.
ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಭಾಷೆ ಮಾತನಾಡುವುದು ಮಂಡ್ಯ ಜಿಲ್ಲೆಯಲ್ಲಿ ಮಾತ್ರ. ಆದರೆ, ಇಲ್ಲಿಯೂ ಇನ್ನುಳಿದ ಐದು ವರ್ಷದಲ್ಲಿ ಕನ್ನಡ ಭಾಷೆ ಹುಡುಕುವ ಸ್ಥಿತಿ ನಿರ್ಮಾಣವಾಗಲಿದೆ. ಏಕೆಂದರೆ ಕನ್ನಡ ಶಾಲೆಗಳಿಗೆ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದೆ. ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಇನ್ನಾದರೂ ಸರ್ಕಾರಗಳು ಚಿಂತನೆ ನಡೆಸಿ ಸಾವಿರಾರು ಇತಿಹಾಸವಿರುವ ಭಾಷೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.ಈ ಹಿಂದೆ ಕರ್ನಾಟಕ ಹರಿದು ಹಂಚಿ ಹೋಗಿದ್ದ ಸಂದರ್ಭದಲ್ಲಿ ಅಂದಿನ ಮೈಸೂರು ಪ್ರಾಂತ್ಯ ಬಿಟ್ಟರೆ ಮದ್ರಾಸ್, ಮುಂಬೈ, ಹೈದರಾಬಾದ್ ಸೇರಿದಂರತೆ ಇತರೆ ಭಾಗಗಳಲ್ಲಿ ತೀವ್ರ ಶೋಷಣೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಡೆಫ್ಯೂಟಿ ಚನ್ನಬಸಪ್ಪ ಅವರು ಕನ್ನಡಿಗರೆಲ್ಲರೂ ಒಂದಾಗಬೇಕೆಂದು ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಗೆ ಕನ್ನಡದ ಮೂಲಕವೇ ಸೆಡ್ಡು ಹೊಡೆಯುತ್ತಾರೆ ಎಂದು ಸ್ಮರಿಸಿದರು.
ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಯೋಗೀಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಜ್ಞೆ ಬೆಳೆಯಬೇಕು. ಕನ್ನಡ ಭಾಷೆ ನೆನೆಗುದಿಗೆ ಬೀಳದೇ ಬದಲಿಗೆ ವೈಚಾರಿಕ ಪ್ರಜ್ಞೆ ಮೂಡುವಂತಾಗಬೇಕು. ಕರ್ನಾಟಕ ಏಕೀಕರಣ ಚಳವಳಿ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡ ಭಾಷೆ ಉಳಿವಿಗೆ ಯುವ ಸಮೂಹ ಮುಂದಾಗಬೇಕು ಎಂದು ಮನವಿ ಮಾಡಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಕಲ್ಯಾಣಾಧಿಕಾರಿ ಬಿ.ಸಿ.ರೇಖಾ ಅವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಿಲಯ ಪಾಲಕ ಎಚ್.ಎನ್.ರವಿ ಭಾಗವಹಿಸಿದ್ದರು.