ನಗರದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತಮಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಮುಂದೆ ವಿಷ ಸೇವಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಕಮ್ ಆಯುರ್ವೇದಿಕ್ ವೈದ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತಮಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಮುಂದೆ ವಿಷ ಸೇವಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಕಮ್ ಆಯುರ್ವೇದಿಕ್ ವೈದ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ.ಬೇಗೂರು ನಿವಾಸಿ ಡಾ. ನಾಗೇಂದ್ರ ಶಿರೂರು ಆತ್ಮಹತ್ಯೆಗೆ ಯತ್ನಿಸಿದ್ದು, ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಆತನನ್ನು ಪೊಲೀಸರು ಚಿಕಿತ್ಸೆಗೆ ದಾಖಲಿಸಿದ್ದಾರೆ. ವಿಧಾನಸೌಧದ ಮುಂದೆ ಬೆಳಗ್ಗೆ 11.20 ಗಂಟೆ ಸುಮಾರಿಗೆ ನಾಗೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನ್ನ ಕುಟುಂಬದ ಜತೆ ಬೇಗೂರಿನಲ್ಲಿ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನಾಗೇಂದ್ರ ಶಿರೂರು ನೆಲೆಸಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಸಮೀಪ ಖಾಸಗಿ ಆಯುರ್ವೇದಿಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯವಸ್ಥಾಪಕನಾಗಿ ನಾಗೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಹಿಂದೂ ಜಾಗರಣಾ ವೇದಿಕೆಯ ಚಟುವಟಿಕೆಯಲ್ಲಿ ಆತ ಸಕ್ರಿಯವಾಗಿದ್ದ. ಅಕ್ರಮ ಬಾಂಗ್ಲಾ ವಲಸಿಗರ ನೆಲೆಗಳು ಎಂದು ಆರೋಪಿಸಿ ಹೆಬ್ಬಗೋಡಿ, ಬನ್ನರುಘಟ್ಟ ಹಾಗೂ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಜತೆ ನಾಗೇಂದ್ರ ದಾಳಿ ನಡೆಸಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.ಈ ಸಂಬಂಧ ಹಿಂದೂ ಪರ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದ ಸೋಲದೇವನಹಳ್ಳಿ ಠಾಣೆ ಪೊಲೀಸರು, ನಾಗೇಂದ್ರ ಬಂಧನಕ್ಕೆ ಆತನ ಮನೆಗೆ ತೆರಳಿದ್ದರು. ಆ ವೇಳೆ ತಪ್ಪಿಸಿಕೊಂಡಿದ್ದ ನಾಗೇಂದ್ರ, ವಿಧಾನಸೌಧ ಮುಂದೆ ಶನಿವಾರ ಬಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿರುವ ನಾಗೇಂದ್ರ ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಬಾಂಗ್ಲಾ ವಾಸಿಗಳ ಬಿಟ್ಟು ನನಗೆ ಕಿರುಕುಳ:ನಗರದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾದೇಶದ ವಲಸಿಗರ ಕುರಿತು ಮಾಹಿತಿ ನೀಡಿದ್ದಕ್ಕೆ ನನಗೆ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ. ದೇಶದ ಭದ್ರತೆಗೆ ಅಪಾಯವಾಗಿರುವ ಬಾಂಗ್ಲಾ ಪ್ರಜೆಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಆದರೆ ಈ ಬಗ್ಗೆ ದನಿ ಎತ್ತಿದ್ದವರ ಮೇಲೆ ದೌರ್ಜನ್ಯ ನಡೆದಿದೆ ಎಂದು ಡಾ.ನಾಗೇಂದ್ರ ಆರೋಪಿಸಿದ್ದಾರೆ.
