ಕೋಮುಗಲಭೆ ವಿರುದ್ಧ ಹಿಂದು ಕಾರ್ಯಕರ್ತರ ಪ್ರತಿಭಟನೆ

| Published : Sep 14 2024, 01:49 AM IST

ಕೋಮುಗಲಭೆ ವಿರುದ್ಧ ಹಿಂದು ಕಾರ್ಯಕರ್ತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗಲಭೆ ಪೂರ್ವಯೋಜಿತ, ಅನ್ಯಧರ್ಮಿಯರು ದುರುದ್ಧೇಶದಿಂದ ಅಶಾಂತಿ ಮೂಡಲು ಗಲಭೆ ಎಬ್ಬಿಸಿದ್ದಾರೆ. ಮೊದಲೇ ಪೆಟ್ರೋಲ್ ಬಾಂಬ್, ಕಲ್ಲು, ಗಾಜಿನ ಬಾಟಲಿ, ಕಬ್ಬಿಣ ರಾಡಿನಂತಹ ಮಾರಕಾಸ್ತ್ರಗಳನ್ನು ಶೇಖರಣೆ ಮಾಡಿಕೊಂಡು ಗಣಪತಿ ವಿಸರ್ಜನೆಗೆ ತೆರಳುತ್ತಿದ್ದ ಮೆರವಣಿಗೆದಾರರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ನಾಗಮಂಗಲದಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದಿರುವ ಕೋಮುಗಲಭೆ ವಿರುದ್ಧ ಪಟ್ಟಣದಲ್ಲಿ ವಿಶ್ವಹಿಂದು ಪರಿಷತ್ ಸೇರಿದಂತೆ ಹಿಂದುಪರ ವಿವಿಧ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿದರು.

ಹಳೆಬಸ್‌ ನಿಲ್ದಾಣ ವೃತ್ತದಲ್ಲಿ ಶುಕ್ರವಾರ ಸಂಜೆ ಹಿಂದು ಕಾರ್ಯಕರ್ತರು ಒಗ್ಗಟ್ಟಿನಿಂದ ಕೋಮುಗಲಭೆ ವಿರುದ್ಧ ಮಾನವ ಸರಪಳಿ ನಿರ್ಮಿಸಿದರು. ಕೆಲಹೊತ್ತು ರಸ್ತೆತಡೆ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ಸಂಘಟನೆ ಕಾರ್ಯಕರ್ತ ಮೊಬೈಲ್‌ ಪುನೀತ್ ಮಾತನಾಡಿ, ಗಲಭೆ ಪೂರ್ವಯೋಜಿತ, ಅನ್ಯಧರ್ಮಿಯರು ದುರುದ್ಧೇಶದಿಂದ ಅಶಾಂತಿ ಮೂಡಲು ಗಲಭೆ ಎಬ್ಬಿಸಿದ್ದಾರೆ. ಮೊದಲೇ ಪೆಟ್ರೋಲ್ ಬಾಂಬ್, ಕಲ್ಲು, ಗಾಜಿನ ಬಾಟಲಿ, ಕಬ್ಬಿಣ ರಾಡಿನಂತಹ ಮಾರಕಾಸ್ತ್ರಗಳನ್ನು ಶೇಖರಣೆ ಮಾಡಿಕೊಂಡು ಗಣಪತಿ ವಿಸರ್ಜನೆಗೆ ತೆರಳುತ್ತಿದ್ದ ಮೆರವಣಿಗೆದಾರರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಅಕ್ಷಯ್ ಮಾತನಾಡಿ, ಹಿಂದುಗಳ ಮೇಲೆ ವಿನಾಕಾರಣ ಆಗಿಂದಾಗ್ಗೆ ದಾಂಧಲೆ ನಡೆಯುತ್ತಿದೆ. ಹಿಂದುಗಳ ಬದುಕಿಗೆ ದಾರಿಯಾಗಿದ್ದ ಅಂಗಡಿ ಮುಂಗಟ್ಟು, ಬೈಕ್‌ಗಳನ್ನು ಸುಟ್ಟು ಕಿಡಿಗೇಡಿಗಳು ವಿಕೃತ ಮೆರೆದಿದ್ದಾರೆ. ಕೋಟ್ಯಂತರ ರು. ಆಸ್ತಿ ಹಿಂದುಗಳು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟೆಲ್ಲಾ ಘಟನೆ ನಡೆದರೂ ಸರ್ಕಾರ ಮೌನವಾಗಿದೆ. ಅಮಾಯಕ ಹಿಂದು ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿ, ರೌಡಿ ಶೀಟ್ ಹಾಕಿ ಹಿಂಸೆ ನೀಡಿರುವುದು ಅಕ್ಷಮ್ಯ ಅಪರಾಧ. ಹಿಂದು ರಾಷ್ಟ್ರದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲವಾಗಿದೆ ಎಂದು ಲೇವಡಿ ಮಾಡಿದರು.

ಪ್ರತಿಭಟನೆಯಲ್ಲಿ ಗುಂಡ, ಜೇಟುಸಿಂಗ್, ಹೇಮಣ್ಣಶೆಟ್ಟಿ, ಕೊರಿಯರ್‌ ಗುರುಪ್ರಸಾದ್, ಪ್ರದೀಪ್‌, ಪವನ್‌ ಹಲವರು ಭಾಗವಹಿಸಿದ್ದರು.ಅಶೋಕ್ ಕುಮಾರ್ ಅಮಾನತ್ತು

ನಾಗಮಂಗಲ:ಪಟ್ಟಣದಲ್ಲಿ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್‌ ಕುಮಾರ್ ತಲೆದಂಡವಾಗಿದೆ.

ಗಣೇಶ ಮೂರ್ತಿ ವಿಸರ್ಜನೆ ಪೂರ್ವ ಮೆರವಣಿಗೆ ವೇಳೆ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಕಲ್ಲುತೂರಾಟ ನಡೆದು ಅಂಗಡಿಗಳಿಗೆ ಬೆಂಕಿ ಬಿದ್ದು ಕೋಮು ಗಲಭೆಯಾಗಿದೆ. ಇದಕ್ಕೆ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯತನವೇ ಕಾರಣ ಎಂಬ ಆರೋಪದಡಿ ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್ ಅವರನ್ನು ಗುರುವಾರ ರಾತ್ರಿ ಸೇವೆಯಿಂದ ಅಮಾನತ್ತುಗೊಳಿಸಿ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.