ಬಾಂಗ್ಲಾದಲ್ಲಿ ಹಿಂದೂ ದೌರ್ಜನ್ಯ: ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರತಿಭಟನೆ

| Published : Aug 14 2024, 12:57 AM IST

ಬಾಂಗ್ಲಾದಲ್ಲಿ ಹಿಂದೂ ದೌರ್ಜನ್ಯ: ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಗ್ಲಾದೇಶದಲ್ಲಿ ಹಿಂದೂಗಳ‌ ಮೇಲೆ ದೌರ್ಜನ್ಯ ಎಸಗುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಕುಶಾಲನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಮತಾಂಧ ಶಕ್ತಿಗಳ ವಿರುದ್ಧ ಧಿಕ್ಕಾರ ಕೂಗಿ‌ ಆಕ್ರೋಷ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಬಾಂಗ್ಲಾದೇಶದಲ್ಲಿ ಹಿಂದೂಗಳ‌ ಮೇಲೆ ದೌರ್ಜನ್ಯ ಎಸಗುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಕುಶಾಲನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸರ್ವ ಧರ್ಮೀಯರು ಪಾಲ್ಗೊಂಡು ಸಾಮರಸ್ಯದ ಘೋಷಣೆಗಳನ್ನು ಕೂಗಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಮತಾಂಧ ಶಕ್ತಿಗಳ ವಿರುದ್ಧ ಧಿಕ್ಕಾರ ಕೂಗಿ‌ ಆಕ್ರೋಷ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್, ಎಲ್ಲಾ ಧರ್ಮದವರನ್ನು ಒಳಗೊಂಡ ಕಾಂಗ್ರೆಸ್ ಪಕ್ಷ ಸಹಜವಾಗಿ ಯಾವುದೇ ಧರ್ಮೀಯರಿಗೆ ಅನ್ಯಾಯವಾದಾಗ ಧ್ವನಿ ಎತ್ತಲಿದೆ. ಬಾಂಗ್ಲಾದೇಶ ದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದು ಸಂಶಯಕ್ಕೆ ಎಡೆ ಮಾಡಿದೆ ಎಂದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಇತರ ಧರ್ಮೀಯರ ವಿರುದ್ಧ ಧ್ವೇಷ ಸಾಧಿಸುವ ಮತಾಂಧ ಮನಃಸ್ಥಿತಿಗಳ ವಿರುದ್ಧ ‌ಕಾಂಗ್ರೆಸ್ ಸದಾ ಧ್ವನಿ ಎತ್ತಲಿದೆ ಎಂದರು.‌

ಎಲ್ಲೆಡೆ ಸಾಮರಸ್ಯ, ಸಹಬಾಳ್ವೆ ನೆಲೆಸಬೇಕೆಂಬುದೇ ಕಾಂಗ್ರೆಸ್ ನ ಧ್ಯೇಯ. ಮಾನವನ ಐಕ್ಯತೆಗೆ ಎಲ್ಲೆಲ್ಲಿ ಭಂಗ ಬರುತ್ತಿರುವ ಕಡೆಗಳಲ್ಲಿ ಹೋರಾಟ ನಡೆಸಿ ಅನ್ಯಾಯಕ್ಕೊಳಗಾದವರ ಕಣ್ಣೀರೊರೆಸುವ ಕೆಲಸ ಮಾಡುತ್ತಾ ಬರುತ್ತಿದೆ ಎಂದರು.

ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮಾತನಾಡಿ, ವಿಶ್ವ ಮಾನವ ಸಂದೇಶ ನೀಡಿದ ಭಾರತದಲ್ಲಿ ‌ಪ್ರತಿಯೊಬ್ಬರೂ ಕೂಡ ಇಂತಹ ಮತಾಂಧ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ. ಅಂತೆಯೇ ಸರ್ವ ಧರ್ಮ ಸಮಾನತೆ ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷ ಕೂಡ ಈ ಕೃತ್ಯ ವನ್ನು ಪ್ರಬಲವಾಗಿ ಖಂಡಿಸುತ್ತದೆ. ಕೂಡಲೆ ಕೇಂದ್ರ ಸರ್ಕಾರ ಬಾಂಗ್ಲಾದೇಶದ ಹಿಂದೂಗಳನ್ನು ರಕ್ಷಿಸುವತ್ತ ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.

ವಕೀಲ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ಬಾಂಗ್ಲಾದಲ್ಲಿ ಪ್ರಾಣ ಕಳೆದುಕೊಂಡ ಹಿಂದೂ ಸಹೋದರರ ಆತ್ಮಕ್ಕೆ ಶಾಂತಿ ಲಭಿಸಬೇಕು, ಉಳಿದವರನ್ನು ಭಗವಂತ ರಕ್ಷಿಸುವಂತೆ ಪ್ರಾರ್ಥಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸದಸ್ಯ ಶಾಜಿ, ಪುರಸಭಾ ಸದಸ್ಯರಾದ ದಿನೇಶ್, ಶಿವಶಂಕರ್, ನವೀನ್ ಗೌಡ, ಹರೀಶ್, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಸುನಿತಾ, ಕೃಷ್ಣೇಗೌಡ, ಜಗದೀಶ್, ಶಿವಕುಮಾರ್, ಮೈಸಿ ಕತ್ತಣ್ಣಿರ ಮತ್ತಿತರರು ಪಾಲ್ಗೊಂಡಿದ್ದರು.