ಸಾರಾಂಶ
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ. ಹಿಂದೂಗಳ ಮನೆ, ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯ ವಿರೋಧಿಸಿ ಹಾಗೂ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಜನಮನ ವೇದಿಕೆಯವರು ನಗರದ ಚಾಮುಂಡಿಪುರಂ ವೃತ್ತದಲ್ಲಿ ಮಂಗಳವಾರ ಮೇಣದಬತ್ತಿ ಹಿಡಿದು ಮೌನ ಪ್ರತಿಭಟನೆ ನಡೆಸಿದರು.ಈ ವೇಳೆ ನಗರ ಪಾಲಿಕ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ. ಹಿಂದೂಗಳ ಮನೆ, ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ಈಗಾಗಲೇ ಹಲವರು ಮೃತಪಟ್ಟಿದ್ದಾರೆ. ಅಲ್ಲಿ ನಡೆಯುತ್ತಿರುವ ರಾಜಕೀಯ ಗಲಭೆಗಳಿಂದಾಗಿ ಹಿಂದೂಗಳು ಬಲಿಯಾಗುತ್ತಿದ್ದಾರೆ. ಸಾವಿರಾರು ಹಿಂದೂಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಮುದಾಯದ ರಕ್ಷಣೆಗೆ ಕೇಂದ್ರ ಸರ್ಕಾರ ಹಕ್ಕೊತ್ತಾಯ ಮಂಡಿಸಲಿ ಎಂದು ಅವರು ಒತ್ತಾಯಿಸಿದರು.
ಬಾಂಗ್ಲಾದೇಶ, ಪಾಕಿಸ್ತಾನಗಳಲ್ಲಿ ಹಿಂದೂಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರ, ಕ್ರೌರ್ಯ ಪ್ರದರ್ಶನ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವಕ್ಕೆ ಹೋಲಿಸಿದರೆ ಹಿಂದೂಗಳ ಜನಸಂಖ್ಯೆ ತೀವ್ರಗತಿಯಲ್ಲಿ ಕುಸಿದಿದೆ. ಮಾನವ ಹತ್ಯೆ ವಿರುದ್ಧ ವಿಶ್ವಸಂಸ್ಥೆ ಧ್ವನಿ ಎತ್ತಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳಿಗೆ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.ಬಿಜೆಪಿ ಕೆ.ಆರ್. ಕ್ಷೇತ್ರ ಅಧ್ಯಕ್ಷ ಗೋಪಾಲ್ ರಾಜ್ ಅರಸ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುಖಂಡರಾದ ಉಮಾಶಂಕರ್, ಮಹೇಶ್, ಲಕ್ಷ್ಮೀನಾರಾಯಣ್, ಮಂಜುನಾಥ್, ಸುರೇಶ್, ಸೋಮೇಶ್, ರಂಗಸ್ವಾಮಿ,
ಶಿವಲಿಂಗಚಾರ್, ರವಿ, ನಾಗೇಂದ್ರ, ಹರ್ಷ, ನಾಗರಾಜ್, ಚಂದ್ರು, ಅರವಿಂದ, ಕಾವ್ಯ ಮೊದಲಾದವರು ಇದ್ದರು.