ಬಿಜೆಪಿ ಟಿಕೆಟ್‌ಗೆ ಶಕ್ತಿ ಪ್ರದರ್ಶನಕ್ಕೆ ಇಳಿದ ಹಿಂದು ಮುಖಂಡ ಸತ್ಯಜಿತ್‌ ಸುರತ್ಕಲ್‌

| Published : Feb 25 2024, 01:51 AM IST

ಬಿಜೆಪಿ ಟಿಕೆಟ್‌ಗೆ ಶಕ್ತಿ ಪ್ರದರ್ಶನಕ್ಕೆ ಇಳಿದ ಹಿಂದು ಮುಖಂಡ ಸತ್ಯಜಿತ್‌ ಸುರತ್ಕಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಫೆ.25ರಂದು ಬಂಟ್ವಾಳದ ತುಂಬೆಯಲ್ಲಿ ಜನಾಗ್ರಹ ಸಮಾವೇಶ ನಡೆಸುತ್ತಿದ್ದಾರೆ. ಸತ್ಯಜಿತ್‌ ಸುರತ್ಕಲ್‌ ಅವರ ಹಿಂಬಾಲಕರು ಈ ಸಮಾವೇಶ ಆಯೋಜಿಸಿದ್ದು, ಇದರೊಂದಿಗೆ ಬಿಜೆಪಿ ಟಿಕೆಟ್‌ಗಾಗಿ ಅರುಣ್ ಪುತ್ತಿಲ, ಬ್ರಿಜೇಶ್ ಚೌಟ ಬಳಿಕ ಮತ್ತೊಬ್ಬ ಪ್ರಬಲ ನಾಯಕ ಅಖಾಡಕ್ಕೆಇಳಿದಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಬಳಿಕ ಮತ್ತೊಬ್ಬ ಹಿಂದು ಮುಖಂಡರೊಬ್ಬರು ಬಿಜೆಪಿ ಟಿಕೆಟ್‌ಗಾಗಿ ಶಕ್ತಿ ಪ್ರದರ್ಶನಕ್ಕೆ ಇಳಿಯುತ್ತಿದ್ದಾರೆ.

ಹಿಂದು ಮುಖಂಡ ಸತ್ಯಜಿತ್‌ ಸುರತ್ಕಲ್‌ ಬಿಜೆಪಿ ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದು, ಇದೇ ಉದ್ದೋಶದಿಂದ ಫೆ.25ರಂದು ಬಂಟ್ವಾಳದ ತುಂಬೆಯಲ್ಲಿ ಜನಾಗ್ರಹ ಸಮಾವೇಶ ನಡೆಸುತ್ತಿದ್ದಾರೆ. ಸತ್ಯಜಿತ್‌ ಸುರತ್ಕಲ್‌ ಅವರ ಹಿಂಬಾಲಕರು ಈ ಸಮಾವೇಶ ಆಯೋಜಿಸಿದ್ದು, ಇದರೊಂದಿಗೆ ಬಿಜೆಪಿ ಟಿಕೆಟ್‌ಗಾಗಿ ಅರುಣ್ ಪುತ್ತಿಲ, ಬ್ರಿಜೇಶ್ ಚೌಟ ಬಳಿಕ ಮತ್ತೊಬ್ಬ ಪ್ರಬಲ ನಾಯಕ ಅಖಾಡಕ್ಕೆಇಳಿದಂತಾಗಿದೆ.

ಈ ಹಿಂದೆ ಪುತ್ತೂರಿನ ಹಿಂದು ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಪರಿವಾರ ಬಿಜೆಪಿ ಟಿಕೆಟ್‌ಗೆ ಒಳಗೊಳಗೇ ಬೇಡಿಕೆ ಮುಂದಿರಿಸಿತ್ತು. ನಂತರದ ರಾಜಕೀಯ ವಿದ್ಯಮಾನಗಳಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಈಗ ಬಿಜೆಪಿ ಸೇರ್ಪಡೆ ಸನಿಹದಲ್ಲಿದ್ದಾರೆ. ಹಾಗಾಗಿ ಸಂಸದ ಸ್ಥಾನಕ್ಕೆ ಅರುಣ್‌ ಕುಮಾರ್‌ ಪುತ್ತಿಲ ಸ್ಪರ್ಧೆ ಹಿಂದೆ ಸರಿದಂತಾಗಿದೆ. ಆದರೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ ಬಿಜೆಪಿ ಟಿಕೆಟ್‌ಗೆ ಪ್ರಯತ್ನದಲ್ಲಿದ್ದಾರೆ. ಬಿಜೆಪಿ ಟಿಕೆಟ್‌ಗೆ ಕಣ್ಣು:

ಸತ್ಯಜಿತ್‌ ಸುರತ್ಕಲ್‌ ಪ್ರಸಕ್ತ ಬಿಜೆಪಿಯ ಯಾವುದೇ ಹುದ್ದೆಯಲ್ಲಿ ಇಲ್ಲ. ಈ ಹಿಂದೆ ಮಂಗಳೂರು(ಉಳ್ಳಾಲ) ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಸತ್ಯಜಿತ್‌ ಹೆಸರು ಕೇಳಿಬಂದಿತ್ತು. ಆದರೆ ಮಂಗಳೂರು ಬದಲು ಮಂಗಳೂರು ಉತ್ತರ (ಸುರತ್ಕಲ್‌)ದ ಟಿಕೆಟ್‌ಗೆ ಅವರು ಆಕಾಂಕ್ಷಿಯಾಗಿದ್ದರು. ಮಂಗಳೂರು ಉತ್ತರದಲ್ಲಿ ಟಿಕೆಟ್‌ ಸಿಗದೇ ಇದ್ದಾಗ ಮಂಗಳೂರು ಕ್ಷೇತ್ರದ ಟಿಕೆಟ್‌ ನಿರಾಕರಿಸಿದ್ದರು ಎಂಬುದು ಪಕ್ಷ ಮುಖಂಡರ ಅಸಮಾಧಾನ. ನಂತರದ ದಿನಗಳಲ್ಲಿ ಸತ್ಯಜಿತ್‌ ಸುರತ್ಕಲ್‌ಗೆ ಪಕ್ಷದಲ್ಲೂ ಯಾವುದೇ ಸ್ಥಾನಮಾನ ನೀಡದೆ ಮೂಲೆಗುಂಪು ಮಾಡಲಾಯಿತು ಎಂಬುದು ಅವರ ಅಭಿಮಾನಿಗಳ ಆರೋಪ. ಆದರೆ ಒಂದು ಕಾಲದಲ್ಲಿ ಹಿಂದು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು ಪ್ರಬಲ ನಾಯಕ ಎನಿಸಿಕೊಂಡ ಸತ್ಯಜಿತ್‌ಗೆ ಅದೇ ಹಿಂದುತ್ವದ ನೆಲೆಯಲ್ಲಿ ಈ ಬಾರಿ ಬಿಜೆಪಿ ಟಿಕೆಟ್‌ಗಾಗಿ ಸದ್ದು ಮಾಡುತ್ತಿದ್ದಾರೆ. ಜತೆಗೆ ಜಿಲ್ಲೆಯ ಪ್ರಬಲ ಬಿಲ್ಲವ ಸಮುದಾಯದ ಬೆಂಬಲದ ವಿಶ್ವಾಸದಲ್ಲಿದ್ದಾರೆ.

ಹಿಂದುತ್ವದ ಆಧಾರದಲ್ಲಿ ಟಿಕೆಟ್‌ ನೀಡುವಂತೆ ಸತ್ಯಜಿತ್‌ ಬೆಂಬಲಿಗರು ಶಕ್ತಿ ಪ್ರದರ್ಶನಕ್ಕೆ ಹೊರಟಿದ್ದಾರೆ. ಜಿಲ್ಲೆಯಲ್ಲಿ ಸತ್ಯಜಿತ್‌ ಸುರತ್ಕಲ್‌ನ ಎಲ್ಲ ಬೆಂಬಲಿಗರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ. ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಪ್ರವೇಶಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ಕರಾವಳಿಯಲ್ಲಿ ಸತ್ಯಜಿತ್‌ ಬಿಜೆಪಿ ಟಿಕೆಟ್‌ಗೆ ಪೈಪೋಟಿಗೆ ಇಳಿದಿರುವುದು ಬಿಜೆಪಿ ಪಾಳಯದಲ್ಲಿ ಆತಂಕ ಪಡುವಂತಾಗಿದೆ. ಸತ್ಯಜಿತ್‌ ವಿರುದ್ಧ ಬಿಜೆಪಿ ಮುನಿಸು ಏಕೆ?

ಹಿಂದುತ್ವದ ಪ್ರಬಲ ನಾಯಕನಾಗಿ, ಬಿಲ್ಲವ ಪ್ರಬಲ ಸಮುದಾಯದ ಬೆಂಬಲದ ನಿರೀಕ್ಷೆಯಲ್ಲಿರುವ ಸತ್ಯಜಿತ್‌ ಸುರತ್ಕಲ್‌ಗೆ ಪಕ್ಷದ ಯಾವುದೇ ಹುದ್ದೆ ನೀಡದೆ ದೂರ ಇರಿಸಲು ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಆದರೂ ಮೂಲಗಳ ಪ್ರಕಾರ, ಸತ್ಯಜಿತ್‌ ಅವರು ಹಿಂದಿನ ಚುನಾವಣೆಗಳಲ್ಲಿ ಸ್ವಜಾತಿ ಬಾಂಧವರ ಪರವಾಗಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿರುವ ಆರೋಪ ಸತ್ಯಜಿತ್‌ ಮೇಲಿದೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ, ಅಂದರೆ ಅಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಿತ್‌ ಶಿವರಾಂ ಪರ ಪ್ರಚಾರ ನಡೆಸಿದ್ದಾರೆ ಎಂಬುದು ಪಕ್ಷ ಮುಖಂಡರ ಮುನಿಸಿಗೆ ಕಾರಣ. ಇದು ಸತ್ಯಜಿತ್‌ ಸುರತ್ಕಲ್‌ ಮತ್ತು ಬಿಜೆಪಿ ನಡುವೆ ಅಂತರ ಸೃಷ್ಟಿಸಿದೆ ಎನ್ನಲಾಗಿದೆ.