ಹಿಂದೂ ಮಹಾಗಣಪತಿ ಶೋಭಾಯಾತ್ರೆ; ಡಿಜೆಗಾಗಿ ಪಟ್ಟು, ಪ್ರತಿಭಟನೆ

| Published : Sep 03 2025, 01:01 AM IST

ಹಿಂದೂ ಮಹಾಗಣಪತಿ ಶೋಭಾಯಾತ್ರೆ; ಡಿಜೆಗಾಗಿ ಪಟ್ಟು, ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ರಾಜ್‌ಕುಮಾರ್ ರಸ್ತೆಯಲ್ಲಿನ ಸೆಂಟನರಿ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ವೇಳೆ ಡಿಜೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ರಸ್ತೆಯಲ್ಲಿಯೇ ದಿಢೀರ್ ಪ್ರತಿಭಟನೆ ನಡೆದು, ಪೊಲೀಸರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದಲ್ಲಿ ರಾಜ್‌ಕುಮಾರ್ ರಸ್ತೆಯಲ್ಲಿನ ಸೆಂಟನರಿ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ವೇಳೆ ಡಿಜೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ರಸ್ತೆಯಲ್ಲಿಯೇ ದಿಢೀರ್ ಪ್ರತಿಭಟನೆ ನಡೆದು, ಪೊಲೀಸರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಹಿಂದೂ ಮಹಾಗಣಪತಿಯ ಶೋಭಾಯಾತ್ರೆಗೆ ಡಿಜೆ ಅಳವಡಿಕೆಗಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತು. ಆದರೆ, ಯಾತ್ರೆ ವೇಳೆ ಎರಡು ಸ್ಪೀಕರ್ ಅಳವಡಿಕೆಗಾಗಿ ಮಾತ್ರ ಅನುಮತಿ ನೀಡಿದ್ದು, ಇದಕ್ಕಿಂತ ಹೆಚ್ಚು ಸ್ಪೀಕರ್ ಅಳವಡಿಕೆಗೆ ಅನುಮತಿಯಿಲ್ಲವೆಂದು ಪೊಲೀಸರು ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಸಂಘಟಕರು, ಪೊಲೀಸರ ಜತೆ ವಾಗ್ವಾದಕ್ಕಿಳಿದರಲ್ಲದೆ ಡಿಜೆಗೆ ಅನುಮತಿ ನೀಡುವಂತೆ ಆಗ್ರಹಿಸಿ ರಸ್ತೆಯಲ್ಲಿಯೇ ಪ್ರತಿಭಟನೆಗಿಳಿದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಸ್ಥಳಕ್ಕೆ ಆಗಮಿಸಿದರಲ್ಲದೆ ಡಿಜೆ ಅನುಮತಿಗಾಗಿ ಸಂಘಟಕರೊಂದಿಗೆ ಪಟ್ಟು ಹಿಡಿದರು. ಕೊನೆಯಲ್ಲಿ ಪೊಲೀಸರು ಡಿಜೆಗೆ ಅನುಮತಿ ನೀಡಿದ ಬಳಿಕ ಶೋಭಾಯಾತ್ರೆ ಮುಂದುವರಿಯಿತು.

ಸೆಂಟನರಿ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿಯನ್ನು ಏಳನೇ ದಿನದಂದು ಅದ್ಧೂರಿ ಶೋಭಾಯಾತ್ರೆಯೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಮಂಗಳವಾದ್ಯಗಳು, ಛದ್ಮ ವೇಷಧಾರಿಗಳು, ಕೋಲಾಟ ಸೇರಿದಂತೆ ನಾನಾ ಜನಪದ ಕಲಾತಂಡಗಳು ಕುಣಿದು ಕುಪ್ಪಳಿಸುವ ಮೂಲಕ ಮೆರವಣಿಗೆಗೆ ಮೆರಗು ತಂದವು. ಬಳಿಕೆ ಇದಕ್ಕೆ ಜತೆಯಾದ ಡಿಜೆ ಹಾಡುಗಳಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ನಗರದ ಗಡಗಿಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ ಮೂಲಕ ಮೆರವಣಿಗೆ ಸಾಗಿತು. ಶೋಭಾಯಾತ್ರೆ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.

ಶ್ರೀರಾಮುಲು, ರೆಡ್ಡಿ ಭರ್ಜರಿ ಕುಣಿತ

ಹಿಂದೂ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಇಬ್ಬರು ನಾಯಕರು ಗಣಪನ ಹಾಡಿಗೆ ನೃತ್ಯ ಮಾಡುತ್ತಿದ್ದಂತೆಯೇ ಮೆರವಣಿಗೆಯಲ್ಲಿ ಜಮಾಯಿಸಿದ್ದ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ತಾವೂ ಸಹ ನೃತ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.