ನಾಳೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ

| Published : Sep 19 2025, 01:00 AM IST

ಸಾರಾಂಶ

ಸರ್ಕಾರ ಡಿ.ಜೆ. ಸೌಂಡ್‌ ಸಿಸ್ಟಂ ಬಳಕೆಗೆ ಅನುಮತಿ ನೀಡದಿದ್ದರೇನಂತೆ, ಹಿಂದೂ ಮಹಾಗಣಪತಿ ಟ್ರಸ್ಟ್‌ನ 8ನೇ ವರ್ಷಕ್ಕೆ ಆಯೋಜನೆ ಮಾಡಿರುವ ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆ ಸೆ.20ರಂದು 2ರಿಂದ 3 ಲಕ್ಷ ಹಿಂದೂ ಸಮಾಜ ಬಾಂಧವರು ಸೇರುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿಯೇ ಸದ್ದು ಮಾಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು ಹೇಳಿದ್ದಾರೆ.

- ಡಿಜೆಗೆ ಅನುಮತಿ ಕೊಡದಿದ್ದರೇನಂತೆ ಮನೆಗೊಬ್ಬರಂತೆ ಹಿಂದೂಗಳೆಲ್ಲಾ ಬನ್ನಿ: ಟ್ರಸ್ಟ್‌ ಅಧ್ಯಕ್ಷ ಜೊಳ್ಳಿ ಗುರು - - -

- ಬೆಳಗ್ಗೆ 10.30ಕ್ಕೆ ಶೋಭಾಯಾತ್ರೆ ಆರಂಭ, ಬಾತಿ ಕೆರೆಯಲ್ಲಿ ಗಣಪತಿ ವಿಸರ್ಜನೆ

- ಸಮಾ‍ಳ, ಡೊಳ್ಳು, ನಾಸಿಕ್ ಡೋಲು, ವೀರಗಾಸೆ, ನಂದಿಕೋಲು ತಂಡಗಳು ಭಾಗಿ - ಈ ಸಲವೂ ತಾಯಂದಿರು, ಯುವತಿಯರು, ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆ - ಇಡೀ ಊರಿನ ಗಣೇಶಗಳನ್ನು ಒಂದೇ ದಿನ, ಒಂದೇ ಕಡೆ ವಿಸರ್ಜನೆಗೆ ಬದ್ಧ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರ ಡಿ.ಜೆ. ಸೌಂಡ್‌ ಸಿಸ್ಟಂ ಬಳಕೆಗೆ ಅನುಮತಿ ನೀಡದಿದ್ದರೇನಂತೆ, ಹಿಂದೂ ಮಹಾಗಣಪತಿ ಟ್ರಸ್ಟ್‌ನ 8ನೇ ವರ್ಷಕ್ಕೆ ಆಯೋಜನೆ ಮಾಡಿರುವ ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆ ಸೆ.20ರಂದು 2ರಿಂದ 3 ಲಕ್ಷ ಹಿಂದೂ ಸಮಾಜ ಬಾಂಧವರು ಸೇರುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿಯೇ ಸದ್ದು ಮಾಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಜಿಲ್ಲೆಗಳಲ್ಲಿ ಡಿ.ಜೆ. ಸೌಂಡ್‌ ಬಳಕೆಗೆ ಅವಕಾಶ ನೀಡಿದ್ದು, ನಾವೂ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೆವು. ಆದರೆ, ಡಿ.ಜೆ.ಗೆ ಅನುಮತಿ ನೀಡಿಲ್ಲ. ಡಿ.ಜೆ.ಗೆ ಯಾರೂ ಅನುಮತಿ ಕೇಳಿಲ್ಲವೆಂದು ಬುಧವಾರ ಡಿಸಿ ಹೇಳಿಕೆ ನೀಡಿದ್ದರಿಂದ ಮತ್ತೆ ಹೋಗಿ ಮನವಿ ನೀಡಿದರೆ, ಅವರು ಡಿ.ಜೆ. ಬಳಸುವಂತಿಲ್ಲವೆಂದು ಹೇಳಿದ್ದಾರೆಂದರು.

3 ಲಕ್ಷ ಭಕ್ತರು ಸೇರುವ ನಿರೀಕ್ಷೆ:

ದಾವಣಗೆರೆಗೆ ಪ್ರತ್ಯೇಕ ಕಾನೂನು ಎಂಬುದಾಗಿ ಹೇಳುವ ಮೂಲಕ ಅಧಿಕಾರಿಗಳು ಹಿಂದುತ್ವ ಮತ್ತು ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಡಿ.ಜೆ. ಬದಲಿಗೆ ನಮ್ಮದೇ ನೆಲದ ಡೊಳ್ಳು, ಸಮಾಳ, ನಾಸಿಕ್ ಡೋಲು, ಕೀಲು ಕುದುರೆ ಸೇರಿದಂತೆ ಜನಪರ ಕಲಾ ತಂಡಗಳು ಶೋಭಾಯಾತ್ರೆಗೆ ಮೆರಗು ನೀಡಲಿವೆ. 2-3 ಲಕ್ಷ ಜನರ ಸೇರುವ ನಿರೀಕ್ಷೆ ಇದೆ. ಪ್ರತಿ ಗ್ರಾಮ, ನಗರ, ಊರಿನ ಪ್ರತಿಯೊಬ್ಬ ಹಿಂದೂಗಳು ಸ್ವಯಂ ಪ್ರೇರಣೆಯಿಂದ ಶೋಭಾಯಾತ್ರೆಯಲ್ಲಿ ಭಾಗಿಯಾದರೆ ಎಲ್ಲ ಕಾನೂನು ಸರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಡಿಜೆಗೆ ಅನುಮತಿ ನೀಡಿದರೆ ಹೈಕೋರ್ಟ್‌ಗೆ:

ಕಾಂಗ್ರೆಸ್-ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ನಾಯಕರಿಗೂ ಹಂದರಗಂಬ ಪೂಜೆಗೆ ನಾವು ಆಹ್ವಾನಿಸುವುದಿಲ್ಲ. ಇನ್ನು ಮುಂದೆ ಡಿ.ಜೆ.ಗೆ ಜಿಲ್ಲಾಡಳಿತ ಅನುಮತಿ ನೀಡಿದರೆ ನಾನೇ ಹೈಕೋರ್ಟ್ ಮೆಟ್ಟಿಲೇರುತ್ತೇನೆ. ಇಡೀ ಊರಿನ ಗಣೇಶ ಮೂರ್ತಿಗಳನ್ನು ಒಂದೇ ದಿನ, ಒಂದೇ ಕಡೆ ವಿಸರ್ಜನೆ ಮಾಡಬೇಕೆಂಬ ಮಾತಿಗೆ ಬದ್ಧರಿದ್ದೇವೆ. ಡಿ.ಜೆ.ಗೆ ಅನುಮತಿ ನೀಡಿಲ್ಲ. ಆದರೆ, ರೋಡ್ ಆರ್ಕೆಸ್ಟ್ರಾ ತಂಡ, ವೀರಗಾಸೆ, ಸಮಾಳ, ಡೊಳ್ಳು, ನಾಸಿಕ್ ಡೊಳ್ಳು ಸೇರಿದಂತೆ ಜಾನಪದ ಕಲಾ ತಂಡ ಭಾಗವಹಿಸಲಿವೆ. ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕವಾಗಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಟ್ರಸ್ಟ್‌ನ ಎಂ.ವಿ. ಜಯಪ್ರಕಾಶ ಮಾಗಿ, ವಿ.ಸಿದ್ದೇಶ, ಆದಿತ್ಯ ಮಂಜುನಾಥ ಅಲ್ಯುಮಿನಿಯಂ, ಕಮಲ್ ಗಿರೀಶ, ಗಿರೀಶಕುಮಾರ, ಜರೀಕಟ್ಟೆ ಚಂದ್ರು, ಐಗೂರು ಪ್ರಕಾಶ, ಜರೀಕಟ್ಟೆ ಮಂಜುನಾಥ ಇತರರು ಇದ್ದರು.

- - -

(ಬಾಕ್ಸ್‌) * ಬಾತಿ ಕೆರೆಯಲ್ಲಿ ಮೂರ್ತಿ ವಿಸರ್ಜನೆ

ಹೈಸ್ಕೂಲ್ ಮೈದಾನದಿಂದ ಸೆ.20ರಂದು ಬೆಳಗ್ಗೆ 10.30ಕ್ಕೆ ಪೂಜೆ, ಮಹಾಮಂಗಳಾರತಿ ಮುಗಿಯುತ್ತಿದ್ದಂತೆಯೇ ಹೊರಡುವ ಹಿಂದೂ ಮಹಾಗಣಪತಿ ಟ್ರಸ್ಟ್‌ನ ಶ್ರೀ ಗಣೇಶನ ಶೋಭಾಯಾತ್ರೆ ಆರಂಭವಾಗಲಿದೆ. ಅಕ್ಕ ಮಹಾದೇವಿ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶ್ರೀ ಜಯದೇವ ವೃತ್ತ, ಕುವೆಂಪು ರಸ್ತೆ, ಹಳೆ ಪಿ.ಬಿ. ರಸ್ತೆ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಗಳ ಮಾರ್ಗವಾಗಿ ತೆರಳಿ ಶ್ರೀ ಗಣೇಶ ಮೂರ್ತಿಯನ್ನು ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಿದ್ದೇವೆ ಎಂದು ಜೊಳ್ಳಿ ಗುರು ಮಾಹಿತಿ ನೀಡಿದರು.

- - -

(ಟಾಪ್‌ ಕೋಟ್‌)

ಶ್ರೀ ಗಣೇಶನ ಮೇಲಿನ ಭಕ್ತಿಯಿಂದ ನಾನು ಸೇವೆ ಮಾಡುತ್ತಿದ್ದೇನೆ. ಹಿಂದೂ ಮಹಾಗಣಪತಿ ಟ್ರಸ್ಟ್‌ ಅಧ್ಯಕ್ಷನಾಗಿ 8 ವರ್ಷದಿಂದ ಹೈಸ್ಕೂಲ್ ಮೈದಾನದಲ್ಲಿ ಗಣೇಶೋತ್ಸವ ಮಾಡುತ್ತಿದ್ದೇವೆ. ಗಣೇಶ ಹಬ್ಬ, ಕಾರ್ಯಕ್ರಮ ಮಾಡಿ ನಾನೇನು ಶಾಸಕ, ಪಾಲಿಕೆ ಮೇಯರ್ ಆಗಬೇಕಾಗಿಲ್ಲ. ನನಗೆ ಗಣೇಶನ ಮೇಲಿನ ಭಕ್ತಿ ಅಷ್ಟೇ ಮುಖ್ಯ.

- ಜೊಳ್ಳಿ ಗುರು, ಅಧ್ಯಕ್ಷ, ಹಿಂದೂ ಮಹಾಗಣಪತಿ ಟ್ರಸ್ಟ್‌.

- - - -18ಕೆಡಿವಿಜಿ4.ಜೆಪಿಜಿ:

ದಾವಣಗೆರೆಯಲ್ಲಿ ಗುರುವಾರ ಹಿಂದೂ ಮಹಾಗಣಪತಿ ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು ಗಣೇಶ ವಿಸರ್ಜನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಟ್ರಸ್ಟ್‌ ಮುಖಂಡರು ಇದ್ದರು.