ಹಿಂದೂ ಮಹಾಸಭಾ ಗಣಪಗೆ ಜನಸಾಗರದ ವಿದಾಯ

| Published : Sep 18 2024, 01:48 AM IST

ಸಾರಾಂಶ

80ನೇ ವರ್ಷದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವದ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನಡೆದು, ತುಂಗಾ ನದಿಯಲ್ಲಿ ಹಣಪತಿ ಮೂರ್ತಿಯ ವಿಸರ್ಜನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಿಂದೂ ಸಂಘಟನಾ ಮಹಾ ಮಂಡಳಿ ಪ್ರತಿಷ್ಠಾಪಿಸಿದ್ದ 80ನೇ ವರ್ಷದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವದ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನಡೆಯಿತು.

ನಗರದ ಗಾಂಧಿ ಬಜಾರ್‌ನಲ್ಲಿ ಕಣ್ಣು ಹಾಯಿಸಿದಷ್ಟು ದೂರ ಜನಸ್ತೋಮ, ಕೇಸರಿ ಬಂಟಿಂಗ್ಸ್, ಮುಗಿಲು ಮುಟ್ಟಿದ ಜೈ ಶ್ರೀರಾಮ, ಬಜರಂಗಿ ಮತ್ತು ಗಜಮುಖನ ಘೋಷಣೆಗಳು ಕೇಳಿ ಬಂದವು.

ಗಾಂಧಿ ಬಜಾರ್‌ನಲ್ಲಿ ನಿರ್ಮಿಸಿದ್ದ ದ್ವಾರದಿಂದ ಹಿಡಿದು ರಾಮಣ್ಣ ಶ್ರೇಷ್ಠಿ ಪಾರ್ಕ್‌ವರೆಗೆ ಕೈಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಯುವಕ, ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು. ಯುವಕರ ತಂಡವೂ ಹುಲಿ ಹೆಜ್ಜೆ ಹಾಕಿದರು. ಜೈಲುರಸ್ತೆ, ಗೋಪಿ ಮತ್ತು ಅಮೀರ್ ಅಹ್ಮದ್ ಸರ್ಕಲ್‌ಗಳು ಕೇಸರಿಮಯವಾಗಿದ್ದವು. ನೆಹರೂ ರಸ್ತೆಯುದ್ದಕ್ಕೂ ಕೇಸರಿ ಬಂಟಿಂಗ್ಸ್‌ಗಳಿಂದ ಶೃಂಗರಿಸಲಾಗಿತ್ತು.

ಕೋಟೆ ಬಡಾವಣೆಯ ಭೀಮೇಶ್ವರ ದೇವಾಲಯದಲ್ಲಿ ಬೆಳಗ್ಗೆ 11ಕ್ಕೆ ಸುಮಾರಿಗೆ ಬೆಕ್ಕಿನ ಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಗಣಪತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.

ಭಕ್ತಾದಿಗಳು ಭೀಮೇಶ್ವರ ದೇವರಿಗೆ ಮೂರು ಸುತ್ತು ಗಣಪನ ಸುತ್ತ ತಿರುಗಿ ನಂತರ ಟ್ರ್ಯಾಕ್ಟರ್ ಮೇಲೆ ತಂದು ಗಣಪತಿಯನ್ನು ಕೂರಿಸಿದರು. ಇಲ್ಲಿಂದ ಆರಂಭಗೊಂಡ ಮೆರವಣಿಗೆ ಜೈನ ಸಮುದಾಯ ಭವನ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕನ ಪ್ರತಿಮೆ, ಬಿ.ಎಚ್. ರಸ್ತೆ, ಎ.ಎ.ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ಸರ್ಕಲ್, ಶಿವ ಮೂರ್ತಿ ಸರ್ಕಲ್, ಸವಳಂಗ ರಸ್ತೆ, ಮಹಾವೀರ ವೃತ್ತ, ಡಿವಿಎಸ್ ವೃತ್ತ ಮಾರ್ಗದ ಮೂಲಕ ಕೋಟೆ ರಸ್ತೆಗೆ ತಲುಪಿ, ದುರ್ಗಾ ಪರಮೇಶ್ವರ ದೇವಾಲಯ ರಸ್ತೆಯಿಂದ ಸಾಗಿ ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನ ಪಕ್ಕದ ತುಂಗಾ ನದಿಯಲ್ಲಿ ಗಣಪತಿಯನ್ನು ವಿಸರ್ಜಿಸಲಾಯಿತು.

ಬೆಳಗ್ಗೆಯಿಂದ ಸಂಜೆಯಾದರೂ ಗಾಂಧಿ ಬಜಾರ್ ರಾಜ ಬೀದಿಯಲ್ಲಿಯೇ ಗಣಪತಿ ಮೆರವಣಿಗೆ ಸಾಗುತಿತ್ತು. ಅಮೀರ್ ಅಹ್ಮದ್ ವೃತ್ತ, ನೆಹರೂ ರಸ್ತೆ ಸೇರಿದಂತೆ ಹಲವೆಡೆ ಗಣಪತಿಯ ಸ್ವಾಗತಕ್ಕಾಗಿ ಹೂವು, ಹಾರ, ವಾದ್ಯ ಮೇಳಗಳೊಂದಿಗೆ ಭಕ್ತಾದಿಗಳು ಕಾಯುತಿದ್ದರು. ರಾಮಣ್ಣ ಶ್ರೇಷ್ಠಿ ಪಾರ್ಕ್ ಎದುರುಗಡೆಯೇ ಗಂಟೆಗಟ್ಟಲೇ ಮೆರವಣಿಗೆ ನಡೆಯಿತು. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ವಿವಿಧ ವಾದ್ಯಗೋಷ್ಠಿ ತಂಡದೊಂದಿಗೆ ಹೆಜ್ಜೆ ಹಾಕುತಿದ್ದ ಯುವಕ ಯುವತಿಯರು, ಕುಣಿದು ಕುಪ್ಪಳಿಸಿ ಭಕ್ತಿ ಪರವಶತೆ ಪ್ರದರ್ಶಿಸಿದರು. ಶಾಸಕ ಚನ್ನಬಸಪ್ಪ ಕೂಡ ವಾದ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು. ಗೋಪಿ ಸರ್ಕಲ್‌ನಲ್ಲಿ ಡಿಜೆ ಅಳವಡಿಸಿದ್ದು, ಸಾವಿರಾರು ಜನರು ಕುಣಿದು ಸಂಭ್ರಮಿಸಿದರು. ರಾಜಬೀದಿಯುದ್ದಕ್ಕೂ ಮನೆಯ ಮೇಲುಗಡೆಯಿಂದಲೇ ಸಾರ್ವಜನಿಕರು ಗಣಪತಿಯ ದರ್ಶನಕ್ಕೆ ಕಾಯುತ್ತ ಕುಳಿತ್ತಿದ್ದರು.

ಗಮನ ಸೆಳೆದ ಪ್ರತಿಕೃತಿಗಳು:

ನಗರದ ಶಿವಪ್ಪನಾಯಕ ವೃತ್ತದ ಬಳಿ ಗಾಂಧಿಬಜಾರ್ ಮುಖ್ಯ ದ್ವಾರದಲ್ಲಿ ಕಾಶಿ ವಿಶ್ವನಾಥನ ಮಹಾದ್ವಾರ ಹಾಗೂ ಅಮೀರ್ ಅಹಮ್ಮದ್ ವೃತ್ತದಲ್ಲಿ ಆಯೋಧ್ಯೆಯ ಪ್ರತಿಕೃತಿ ಹಾಗೂ ನಗರದ ನೆಹರು ರಸ್ತೆಯಲ್ಲಿ ಗಣಪತಿ ಯ ವಿವಿಧ ನಾಮವಳಿ ಹಾಗೂ ಅಲಂಕೃತ ಪ್ಲೆಕ್ಸ್‌ಗಳು, ದೈವಜ್ಞ ವೃತ್ತದಲ್ಲಿ ಗರುಡನ ಅಲಂಕಾರ , ಎಂ.ಆರ್.ಎಸ್. ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಕೃತಿ ಸ್ಥಾಪಿಸಲಾಗಿತ್ತು. ಎಸ್.ಪಿ.ಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಟಿ.ಶೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ, ಡಾ.ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಸರ್.ಎಂ. ವಿಶ್ವೇಶ್ವರಯ್ಯ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಕೋಟೆ ಪೊಲೀಸ್ ಠಾಣೆ ರಸ್ತೆಯ ಮೂಲಕ ಪುನಃ ಭೀಮೇಶ್ವರ ದೇವಾಲಯದ ಬಳಿ ತೆರಳಿ ಪಕ್ಕದ ತುಂಗಾ ನದಿಯ ಭೀಮನ ಮಡುವಿನಲ್ಲಿ ಗಣೇಶನ ನಿಮಜ್ಜನ ನೆರವೇರಿತು.

ಗಣೇಶನಿಗೆ ನೋಟಿನ ಹಾರ:

ಹಿಂದೂ ಮಹಾಮಂಡಳದ ಗಣೇಶನ ಮೆರವಣಿಗೆ ಸಾಗುವ ಪ್ರತಿ ಭಾಗದಲ್ಲೂ ಸಹ ವಿವಿಧ ಗಾತ್ರದ, ವಿವಿಧ ಬಣ್ಣದ ಹೂವಿನ ಹಾರ ಹಾಕಲಾಗುತ್ತಿದೆ. ಆದರೆ, ಈ ಬಾರಿ ಶಿವಮೊಗ್ಗದಲ್ಲಿ ಎರಡು ಕಡೆ ನೋಟಿನ ಹಾರ ಹಾಕಲಾಗುತ್ತಿದೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ನ ಪರಾಜಿತ ಅಭ್ಯರ್ಥಿ ಯೋಗೀಶ್ ಅವರು 10 ಹಾಗೂ 20 ರು.ಗಳಲ್ಲಿ ತಯಾರಿಸಿದ ನೋಟಿನ‌ ಹಾರವನ್ನು ಹಾಕಿದರು.

ಅದೇ ರೀತಿ ಗಾಂಧಿ ಬಜಾರ್​​ನ ಬಟ್ಟೆ ಮಾರ್ಕೆಟ್​​ನಲ್ಲಿಯೂ ಸಹ ನೋಟಿನ‌ ಹಾರ ಹಾಕಲಾಯಿತು. ನೋಟಿನ ಹಾರದ ಕುರಿತು ಮಾತನಾಡಿದ ಯೋಗೇಶ್ ಅವರು, ನಮ್ಮ ಹಿಂದೂ ಮಹಾಮಂಡಳದ ಗಣಪತಿ ಪ್ರತಿಷ್ಠಾಪಿಸಿ 80 ವರ್ಷಗಳಾಗಿವೆ. ಇದರ ಸವಿನೆನಪಿಗಾಗಿ ನಾವು 80 ಸಾವಿರ ರು. ಮೌಲ್ಯದ 10 ಹಾಗೂ 20 ರು. ನೋಟಿನಲ್ಲಿ ಹಾರ ತಯಾರಿಸಿದ್ದೇವೆ. ಕಳೆದ ವರ್ಷ ಒಣ ಕೊಬ್ಬರಿ ಹಾರ ಹಾಕಲಾಗಿತ್ತು. ಈ ಹಾರನ್ನು ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಗಣೇಶನಿಗೆ ಅರ್ಪಿಸಲಾಗುವುದು. ನಂತರ ಈ ಹಾರವನ್ನು ಭೀಮೇಶ್ವರ ದೇವಾಲಯದ ಅಭಿವೃದ್ಧಿಗೆ ನೀಡಲಾಗುವುದು ಎಂದು ತಿಳಿಸಿದರು.

ಮೆರವಣಿಗೆ ಉದ್ದಕ್ಕೂ ಪೊಲೀಸ್‌ ಕಣ್ಗಾವಲು: ನಗರದಲ್ಲಿ ನಡೆಯುವ ಹಿಂದೂ ಮಹಾಮಂಡಳಿ ಗಣಪತಿ ಮೆರವಣಿಗೆಯ ಬಂದೋಬಸ್ತ್ ಕರ್ತವ್ಯಕ್ಕೆ 03 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 25 ಪೊಲೀಸ್ ಉಪಾಧೀಕ್ಷಕರು, 60 ಪೊಲೀಸ್ ನಿರೀಕ್ಷಕರು, 110 ಪೊಲೀಸ್ ಉಪನಿರೀಕ್ಷಕರು, 200 ಸಹಾಯಕ ಪೊಲೀಸ್ ನಿರೀಕ್ಷಕರು, 3,500 ಪೊಲೀಸ್ ಹೆಡ್ ಕಾನ್ಸ್​ಟೇಬಲ್, ಪೊಲೀಸ್ ಕಾನ್ಸ್​ಟೇಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿ, 01- ಆರ್‌ಎಎಫ್‌ ತುಕಡಿ, 08 ಡಿಎಆರ್ ತುಕಡಿ, 1 ಕ್ಯಾಆರ್‌ಟಿ ತುಕಡಿ, 01 ಡಿಎಸ್‌ಡಬ್ಲ್ಯುಎಟಿ ತುಕಡಿ, 10 ಕೆಎಸ್ಆರ್​​ಪಿ ತುಕಡಿ, 5 ದ್ರೋಣ್ ಕ್ಯಾಮರಾಗಳು, 100 ವಿಡಿಯೋಗ್ರಾಫರ್​​ಗಳನ್ನು ನಿಯೋಜಿಸಲಾಗಿತ್ತು.

ನೂಕು ನುಗ್ಗಲು:

ಗಾಂಧಿ ಬಜಾರ್‌ನ ಆನ್ವೇರಪ್ಪನ ಕೇರಿ ತಿರುವಿಗೆ ಗಪಪತಿ ಮೆರವಣಿಗೆ ಬರುವ ಮುನ್ನವೇ ನೂಕುನುಗ್ಗಲು ಉಂಟಾಗಿತ್ತು. ಕಿರಿದಾದ ಜಾಗದಲ್ಲಿ ಪೊಲೀಸರ ವ್ಯಾನು ಒಂದು ಕಡೆ ನಿಂತಿದ್ದರೆ. ಮತ್ತೊಂದು ಕಡೆ ಪೊಲೀಸರ ಸಿಬ್ಬಂದಿಯ ಸರ್ಪಗಾವಲಿ ನಿಂದ ವಿಸರ್ಜನ ಮೆರವಣಿಗೆಯಲ್ಲಿದ್ದವರಿಗೆ ನೂಕು ನುಗ್ಗಲು ಉಂಟಾಗಿತ್ತು.

ಗಾಂಧಿಬಜಾರ್‌ನ ಸುನ್ನಿ ಜಾಮೀಯ ಮಸೀದಿ ಬಳಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶಾಂತಿಯುತವಾಗಿ ಮುಂದೆ ಸಾಗಿತು. ಡೊಳ್ಳು ಯಾವಾಗಲೂ ಈ ಸ್ಥಳದಲ್ಲಿ ಸಂಗೀತದ ವಾದ್ಯಗಳು ಮೊಳಗುತ್ತಿದ್ದವು. ಆದರೆ, ಈ ಬಾರಿ ಯಾವುದೇ ವಾದ್ಯಗಳು ಇಲ್ಲದೆ ಗಣಪ ಸಾಗಿ ಬಂದಿದೆ. ಈ ವೇಳೆ ಮಾಮೂಲಿ ಪೊಲೀಸರ ಸರ್ಪಗಾವಲು ಇತ್ತು. ಪ್ರತಿವರ್ಷದಂತೆ ಈ ಬಾರಿಯೂ ಕರ್ಪೂರವನ್ನು ಸುಡಲಾಯಿತು.ಮಾಜಿ ಕಾರ್ಪೊರೇಟರ್‌ಗಳು, ಎಂಎಲ್‌ಎ, ಭರ್ಜರಿ ಸ್ಟೆಪ್‌

ಮೆರವಣಿಗೆಯಲ್ಲಿ ಶಾಸಕ ಎಸ್‌.ಎನ್.‌ಚನ್ನಬಸಪ್ಪ ಹೆಜ್ಜೆ ಹಾಕಿದರು. ಅವರೊಂದಿಗೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಡಾನ್ಸ್‌ ಮಾಡಿದರು. ಇನ್ನು, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಹೆಜ್ಜೆ ಹಾಕಿದರು. ಹುಲಿ ಕುಣಿತಕ್ಕೆ ಜನರ ಫಿದಾ ಆದರು. ಹುಲಿ ವೇಷಧಾರಿಗಳ ಜೊತೆಗೆ ಯುವತಿಯರು ಭರ್ಜರಿ ಸ್ಟೆಪ್ಸ್‌ ಹಾಕಿದರು.ವಿಜಯೇಂದ್ರ, ಕೆ.ಎಸ್‌.ಈಶ್ವರಪ್ಪ ಮುಖಾಮುಖಿ; ಮಾತಿಲ್ಲ ಕತೆಯಿಲ್ಲ

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಕುಟುಂಬದವರು ಒಟ್ಟಿಗೆ ಸೇರಿದ ದೃಶ್ಯಕ್ಕೆ ಹಿಂದೂ ಮಹಾಸಭಾ ಗಣಪತಿ ಸನ್ನಿಧಿ ಸಾಕ್ಷಿಯಾಯಿತು.ಮೆರವಣಿಗೆಯಲ್ಲಿ ಅಕ್ಕ ಪಕ್ಕದಲ್ಲಿ ಕುಳಿತ ಬಿ.ವೈ.ವಿಜಯೇಂದ್ರ ಮತ್ತು ಕೆ.ಎಸ್.ಈಶ್ವರಪ್ಪ ಮುಖಮುಖಿಯಾಗಿದ್ದರು.

ಹಿಂದೂ ಮಹಾಸಭಾ ಗಣಪತಿಯ ದರ್ಶನ ಪಡೆಯಲು ಬಿ.ವೈ.ವಿಜಯೇಂದ್ರ ಮತ್ತು ಬಿ.ವೈ.ರಾಘವೇಂದ್ರ ಬಂದಿದ್ದ ವೇಳೆಯೇ ಇತ್ತ ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಹ ಗಣಪನ ದರ್ಶನಕ್ಕೆ ಆಗಮನಿಸಿದ್ದರು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಶ್ವರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅಕ್ಕ ಪಕ್ಕದಲ್ಲಿ ಕುಳಿತ್ತಿದ್ದರೂ ಮಾತುಕತೆ ಇರಲಿಲ್ಲ. ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಸಂಸದ ಬಿವೈ ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭಾಗಿಯಾಗಿದ್ದರು. ಕಾರ್ಯಕರ್ತರು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದರು.ರಿಪ್ಪನ್‍ಪೇಟೆ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

ರಿಪ್ಪನ್‍ಪೇಟೆ: ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿಯ 57ನೇ ಗಣೇಶೋತ್ಸವ ಹನ್ನೊಂದು ದಿನದ ಗಣಪತಿ ವಿಸರ್ಜನಾ ಜನಾಕರ್ಷಣೆಗೊಂಡಿತು.ಗಣೇಶನ ರಾಜಬೀದಿ ಉತ್ಸವಕ್ಕೆ ಹೆಸರಾಂತ ಜಾನಪದ ಕಲಾತಂಡಗಳ ಮೆರಗಿನೊಂದಿಗೆ ಗಣಪತಿ ಉತ್ಸವ ಸಾಗುವ ಮಾರ್ಗದಲ್ಲಿ ತಳಿರು-ತೋರಣ ಮತ್ತು ರಂಗೋಲಿಯೊಂದಿಗೆ ಉತ್ಸವವನ್ನು ಸ್ವಾಗತಿಸುವ ಮೂಲಕ ಬರಮಾಡಿಕೊಂಡರು. ಇದರೊಂದಿಗೆ ಡಿ.ಜೆ.ಸೌಂಡ್‍ಗೆ ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು ನೃತ್ಯ ಆಕರ್ಶಿಸಿತು.

ಗಣಪತಿ ರಾಜ ಬೀದಿ ಉತ್ಸವಕ್ಕೆ ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ಶ್ರೀರೇಣುಕಾನಂದ ಸ್ವಾಮಿಜಿ ಚಾಲನೆ ನೀಡಿದರು. ಉತ್ಸವ ವಿನಾಯಕ ವೃತ್ತಕ್ಕೆ ಬರುತ್ತಿದ್ದಂತೆ ಮುಸ್ಲಿಂ ಮುಖಂಡರು ಗಣಪತಿಗೆ ಹಾರಹಾಕಿ ಸಂಭ್ರಮಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಶಾಸಕ ಅರಗ ಜ್ಞಾನೇಂದ್ರ ಮಾಜಿ ಸಚಿವ ಹರತಾಳು ಹಾಲಪ್ಪ ತಮ್ಮ ಬೆಂಬಲಿಗ ರೊಂದಿಗೆ ಬಂದು ಗಣಪತಿ ಮೂರ್ತಿಗೆ ಹಾರ ಹಾಕಿ ವಿಘ್ನ ನಿವಾರಕನ ದರ್ಶನಶೀರ್ವಾದ ಪಡೆದರು. ರಾತ್ರಿ 10-30ಕ್ಕೆ ವಿನಾಯಕ ವೃತ್ತದಲ್ಲಿ ಎನ್.ಆರ್.ಪುರ ಅಭಿನವ ಮ್ಯೂಜಿಕಲ್ ಈವೆಂಟ್ಸ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.