ಹೊನ್ನಾಳಿ ಪಟ್ಟಣದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗೌರಿ-ಗಣೇಶ ಸೇವಾ ಸಮಿತಿಯಿಂದ ಗಣೇಶ ಪ್ರತಿಷ್ಠಾಪಿಸಲಾಗಿದ್ದ ಗೌರಿ- ಗಣೇಶ ಮೂರ್ತಿಗಳನ್ನು ಅಕ್ಟೋಬರ್ 4ರಂದು ಭಾನುವಾರ ಶಾಂತಿಯುತವಾಗಿ ಮೆರವಣಿಗೆ ನಡೆಸಿ, ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.

- ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ, ತುಂಗಭದ್ರಾ ನದಿಯಲ್ಲಿ ವಿಸರ್ಜನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗೌರಿ-ಗಣೇಶ ಸೇವಾ ಸಮಿತಿಯಿಂದ ಗಣೇಶ ಪ್ರತಿಷ್ಠಾಪಿಸಲಾಗಿದ್ದ ಗೌರಿ- ಗಣೇಶ ಮೂರ್ತಿಗಳನ್ನು ಅಕ್ಟೋಬರ್ 4ರಂದು ಭಾನುವಾರ ಶಾಂತಿಯುತವಾಗಿ ಮೆರವಣಿಗೆ ನಡೆಸಿ, ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.

ಪೂಜೆ ಸಲ್ಲಿಸಿದ ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆಗೆ ಚಾಲನೆ ದೊರೆಯಿತು. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ನಂತರ ಹಳದಮ್ಮ ದೇವಿ ದೇವಸ್ಥಾನದಿಂದ ಅಲಂಕೃತ ಟ್ರ‍್ಯಾಕ್ಟರ್‌ನಲ್ಲಿ ಮೆರವಣಿಗೆ ಶುರುವಾಯಿತು. ಅನೇಕ ಭಕ್ತರು ಹಣ್ಣು, ಕಾಯಿ, ಹೂವುಗಳನ್ನು ನೀಡಿ ಗೌರಿ-ಗಣೇಶನಿಗೆ ಪೂಜೆ ಸಲ್ಲಿಸಿದರು. ವಿವಿಧ ಕಲಾ ಮೇಳಗಳೊಂದಿಗೆ ದುರ್ಗಿಗುಡಿ ಸರ್ಕಲ್, ಮರಳೋಣಿ ರಸ್ತೆ ಮೂಲಕ ಸಾಗಿದ ಉತ್ಸವ ಹಿರೇಮಠ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಪೇಟೆ ಬೀದಿ ತಲುಪಿತು. ಅಲ್ಲಿಂದ ಚಾಂದಿನಿ ಚೌಕ್ ಮೂಲಕ ನದಿವರೆಗೆ ಸಾಗಿ ಗೌರಿ-ಗಣೇಶ ಮೂರ್ತಿಗಳನ್ನು ಭಾನುವಾರ ರಾತ್ರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಉತ್ಸವ ಹಿನ್ನೆಲೆ ಹೊನ್ನಾಳಿ ಪಟ್ಟಣ ಕೇಸರಿಮಯವಾಗಿತ್ತು. ಆಂಜನೇಯ ಸ್ವಾಮಿ, ಭಾರತ ಮಾತೆ, ಶಿವಾಜಿ ಪ್ರತಿಮೆಗಳನ್ನು ಪ್ರಮುಖ ವೃತ್ತಗಳಲ್ಲಿ ಇಡಲಾಗಿತ್ತು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಮತಿ ರಸ್ತೆಯ ಹಿರೇಕಲ್ಮಠವರೆಗೆ, ತುಮ್ಮಿನಕಟ್ಟೆ ರಸ್ತೆ ಉದ್ದಕ್ಕೂ ವೀರ ಸಾರ್ವಕರ್, ಭಗತ್‌ ಸಿಂಗ್, ಚಂದ್ರಶೇಖರ್ ಆಜಾದ್, ವಿಷ್ಣು ದಿಗಂಬರ ಫುಲೇಸ್ಕರ್, ಸಂಗೊಳ್ಳಿ ರಾಯಣ್ಣ, ಮದನ್‌ ಲಾಲ್ ಧೀಂಗ್ರ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕ್ರಾಂತಿಕಾರಿಗಳ ಫ್ಲೆಕ್ಸ್‌ಗಳು ಪಟ್ಟಣದಲ್ಲಿ ರಾರಾಜಿಸುತ್ತಿದ್ದವು.

ಗಣೇಶ ಪ್ರತಿಷ್ಠಾಪನೆಗೆ 50ರ ಸಂಭ್ರಮ:

ಹಳದಮ್ಮ ದೇವಸ್ಥಾನದಲ್ಲಿ ಪ್ರತಿವರ್ಷ ಪ್ರತಿಷ್ಠಾಪನೆಗೊಳ್ಳುವ ಹಿಂದೂ ಮಹಾಸಭಾ ಗೌರಿ-ಗಣೇಶ ಸಮಿತಿಗೆ ಇದೀಗ 50 ವರ್ಷ ತುಂಬಿದ್ದರಿಂದ ಸಮಿತಿಯವರು ವಿಶೇಷವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಡಿಜೆ ಸೌಂಡ್ಸ್‌ ಸದ್ದಿಗೆ ಯುವಕರು ಹಾಗೂ ಯುವತಿಯರು ಸಖತ್ ಸ್ಟೆಪ್ ಹಾಕಿ ಕುಣಿದತು. ಮಂಗಳೂರಿನ ಚಂಡೆವಾದ್ಯ, ಡೊಳ್ಳು ಕುಣಿತ, ಮಂಗಳವಾದ್ಯ ಇನ್ನಿತರ ಕಲಾಮೇಳಗಳು ಶೋಭಾಯಾತ್ರೆಗೆ ಮೆರುಗು ನೀಡಿದವು. ಮೆರಣಿಗೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಡೊಳ್ಳು ಬಾರಿಸುತ್ತಾ ಭರ್ಜರಿ ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಸಮಿತಿಯ ಅಧ್ಯಕ್ಷ ಎಂ.ಆರ್.ಮಹೇಶ್ ಸೇರಿದಂತೆ ಸಮಿತಿಯ ಸದಸ್ಯರು ಯುವ ಮುಖಡರು ಕೂಡ ಡ್ಯಾನ್ಸ್ ಮಾಡಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌:

ಚನ್ನಗಿರಿ ಉಪವಿಭಾಗ ಡಿವೈಎಸ್‌ಪಿ ರುದ್ರೇಶಪ್ಪ ಉಜ್ಜನಿಕೊಪ್ಪ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಹಾಗೂ ನ್ಯಾಮತಿ ಪೊಲೀಸ್‌ ಇನ್‌ಸ್ಪೆಕ್ಟರ್ ಸಿದ್ದನಗೌಡ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಗಣೇಶ ವಿಸರ್ಜನೆ ಕಾರ್ಯಕ್ರಮ ಸಂಪನ್ನಗೊಂಡಿತು.

- - -

-5ಎಚ್.ಎಲ್.ಐ1: ಹೊನ್ನಾಳಿ ಪಟ್ಟಣದ ಹಿಂದೂ ಮಹಾಸಭಾ ವತಿಯಿಂದ 50ನೇ ವರ್ಷದ ಹಿನ್ನೆಲೆ ಭಾನುವಾರ ಗೌರಿ-ಗಣೇಶ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು.

-5ಎಚ್.ಎಲ್.ಐ1ಎ: ಹೊನ್ನಾಳಿ ಪಟ್ಟಣದ ಹಿಂದೂ ಮಹಾಸಭಾ ಗೌರಿ-ಗಣೇಶ ಮುೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಡೊಳ್ಳು ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದರು.