ಇಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

| Published : Sep 04 2025, 01:00 AM IST

ಇಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನೆ ಸೆ.೪ರ ಗುರುವಾರ ನಡೆಯಲಿದೆ.

ಭದ್ರಾವತಿ: ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನೆ ಸೆ.೪ರ ಗುರುವಾರ ನಡೆಯಲಿದೆ.

ಈ ಬಾರಿ ಶ್ವೇತ ವರ್ಣದ ಅರಳಿದ ಕಮಲದ ಆಕರ್ಷಕ ಆಲಂಕಾರದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಳೇನಗರದ ಶಿಲ್ಪ ಕಲಾವಿದರಾದ ರಂಗಪ್ಪ ಕುಟುಂಬದವರು ಮೂರ್ತಿ ತಯಾರಿಸಿದ್ದು, ಸುಮಾರು ೬ ಅಡಿ ಎತ್ತರವಿದೆ.

ವೈಭವಯುತ ರಾಜಬೀದಿ ಉತ್ಸವ ಮೆರವಣಿಗೆ : ಉತ್ಸವ ಮೆರವಣಿಗೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಸಹ ನಿರೀಕ್ಷೆಗೂ ಮೀರಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಪ್ರಮುಖ ವೃತ್ತಗಳಲ್ಲಿ ನಿರ್ಮಿಸಿರುವ ದ್ವಾರಬಾಗಿಲುಗಳ ಬಳಿ ಫ್ಲೆಕ್ಸ್, ಬಂಟಿಕ್ಸ್, ಕೇಸರಿ ಧ್ವಜ ರಾರಾಜಿಸುತ್ತಿವೆ. ಹೊಸಮನೆ ಮುಖ್ಯ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಬಿ.ಎಚ್.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಕೇಸರಿಮಯವಾಗಿ ಕಂಗೊಳಿಸುತ್ತಿವೆ. ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಗೊಂಬೆ ನೃತ್ಯ, ವೀರಗಾಸೆ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ. ಸಾವಿರಾರು ಭಕ್ತರು ಕಲಾತಂಡಗಳೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಅಂಗಡಿಮುಂಗಟ್ಟುಗಳ ಬಳಿ ಅನ್ನಸಂತರ್ಪಣೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಲಾಡು, ಮಜ್ಜಿಗೆ, ಪಾನಕ ವಿತರಣೆ ನಡೆಯಲಿದೆ.

ಬಿಗಿ ಪೊಲೀಸ್ ಬಂದೋಬಸ್ತ್ :

ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ೩ ಪೊಲೀಸ್ ಅಧೀಕ್ಷಕರು, ೫ ಹೆಚ್ಚುವರಿ ಅಧೀಕ್ಷಕರು, ೧೭ ಪೊಲೀಸ್ ಉಪಾಧೀಕ್ಷಕರು, ೩೪ ವೃತ್ತ ನಿರೀಕ್ಷಕರು, ೨೩ ನಿರೀಕ್ಷಕರು, ೧೭೫೦ ಕಾನ್‌ಸ್ಟೇಬಲ್, ೨೨೦ ಗೃಹರಕ್ಷಕದಳ, ೮ ಕೆಎಸ್‌ಆರ್‌ಪಿ(ಮೀಸಲು ಪಡೆ) ತುಕಡಿ, ೮ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ(ಡಿಆರ್) ತುಕಡಿ, 1 ಕ್ಷಿಪ್ರ ಕಾರ್ಯಪಡೆ(ಆರ್‌ಎಎಫ್) ತುಕಡಿ, 1 ವಿಶೇಷ ಕಾರ್ಯಪಡೆ(ಎಸ್‌ಎಎಫ್) ತುಕಡಿ ಹಾಗೂ ೧೦೦ ದ್ರೋಣ್ ನಿರ್ವಾಹಕರು ಮತ್ತು ೫೦ ವಿಡಿಯೋ ಚಿತ್ರೀಕರಣ ಛಾಯಾಗ್ರಾಹಕರು ಬಿಗಿ ಪೊಲೀಸ್ ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಎಲ್ಲಾ ಧರ್ಮದವರು ಶಾಂತಿ ಸೌರ್ಹಾದಯುತವಾಗಿ ವರ್ತಿಸುವ ಮೂಲಕ ವಿಸರ್ಜನಾ ಪೂರ್ವ ಮೆರವಣಿಗೆ ಯಶಸ್ವಿಗೊಳಿಸುವಂತೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಕೋರಿದೆ.