Hindu Mahasagara Ganeshotsava in Hosadurga
-ಟಿಬಿ ವೃತ್ತದಲ್ಲಿ ಗಣೇಶ ಮೂರ್ತಿ ಮೆರವಣಿಗೆಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಚಾಲನೆ
ಕನ್ನಡಪ್ರಭ ವಾರ್ತೆ ಹೊಸದುರ್ಗಹಳೆ ಪ್ರವಾಸಿ ಮಂದಿರದ ಆವರಣದಲ್ಲಿ ವಿರಾಟ್ ಹಿಂದೂ ಮಹಾಸಾಗರ ಗಣಪತಿ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ವಿಸರ್ಜನಾ ಮಹೋತ್ಸವ ಶನಿವಾರ ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರ ನಡುವೆ ಸಂಭ್ರಮ ಸಡಗರದಿಂದ ನಡಯಿತು.
ಟಿಬಿ ವೃತ್ತದಲ್ಲಿನ ಪೆಂಟಾಲ್ ನಿಂದ ಅಲಂಕೃತ ತೆರೆದ ವಾಹನದಲ್ಲಿ ಹೊರಟ ಗಣೇಶ ಮೂರ್ತಿಯ ಮೆರವಣಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಹಿರಿಯೂರು ವೃತ್ತ ಮದಕರಿ ವೃತ್ತದ ಮೂಲಕ ಸಾಗಿ ನಂತರ ಮಠದ ಹೊಂಡದಲ್ಲಿ ವಿಸರ್ಜನೆ ಗೊಳಿಸಲಾಯಿತು.ಟಿಬಿ ವೃತ್ತದಲ್ಲಿ ಗಣೇಶ ಮೂರ್ತಿಯ ಮೆರವಣಿಗೆಗೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಡಿಜೆ ಸೌಂಡಿಗೆ ಯುವಕರು, ಯುವತಿಯರು ಮಕ್ಕಳು ಮಹಿಳೆಯರು ಕುಣಿದು ಕುಪ್ಪಳಿಸಿದರು.ಇದರ ಜೊತೆಯಲ್ಲಿ ಕರಡಿ ವೇಷದಾರಿಗಳ ಕುಣಿತ, ಹುಲಿ ವೇಷದಾರಿಗಳ ಕುಣಿತ ನೆರೆದಿದ್ದ ಜನರನ್ನು ರಂಜಿಸಿದವು.
ದಾರಿಯುದ್ದಕ್ಕೂ ವಿವಿಧ ಸಂಘಟನೆಗಳವರು ಉಪಹಾರ ವ್ಯವಸ್ಥೆ ಸೇರಿದಂತೆ ತಂಪು ಪಾನೀಯ ವ್ಯವಸ್ಥೆಯನ್ನು ಮಾಡಿದ್ದರು. ಅಲ್ಲದೆ ಮುಖ್ಯ ರಸ್ತೆಯ ಹಿಕ್ಕೆಲೆಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಅಂಗಡಿ ಮುಗ್ಗಟ್ಟುಗಳನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು.ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಬಂದೂಬಸ್ತ್ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಮಾರ್ದನಿಸಿದ ಡಿಜೆ ಸೌಂಡ್: ಗಣೇಶ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಸುಪ್ರೀಕೋರ್ಟ್ ನಿರ್ಬಂಧ ಹೇರಿದ್ದರು. ಹೊಸದುರ್ಗದಲ್ಲಿ ಮಾತ್ರ ಇದಕ್ಕೆ ಯಾವುದೇ ನಿರ್ಬಂಧ ಕಂಡು ಬಂದಂತೆ ಕಾಣಿಸಲಿಲ್ಲ. ಸ್ಪೀಕರ್ ನೆಪದಲ್ಲಿ ನೀಡಲಾಗಿದ್ದ ಬೃಹತ್ ಗಾತ್ರದ ವರ್ಣ ರಂಜಿತ ವಿದ್ಯುತ್ ಅಲಂಕಾರ, ಡಿಜೆಯ ಶಬ್ಧ ಇಡೀ ಪಟ್ಟಣವನ್ನೆ ನಡುಗಿಸುವಂತಿತ್ತು. ಇಷ್ಟಾದರೂ ಮರವಣಿಗೆಯಲ್ಲಿದ್ದ ಉನ್ನತ ಅಧಿಕಾರಿಗಳು ಯಾವುದೇ ಚಕಾರವೆತ್ತಲಿಲ್ಲ.ನೃತ್ಯ ಮಾಡಿದ ಚನ್ನೈ ಹುಡುಗಿಯರು: ಮೆರವಣಿಗೆಗೆ ರಂಗು ತರಲು 20ಕ್ಕೂ ಹೆಚ್ಚು ಹುಡುಗಿಯರನ್ನು ಚನ್ನೈನಿಂದ ಕರೆತರಲಾಗಿತ್ತು. ಮೆರವಣಿಗೆಯಲ್ಲಿ ತಮಿಳು ಹಾಡಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದರು. ಗಣಪತಿ ವಿಸರ್ಜನೆ ವೇಳೆ ತಮಿಳು ಹಾಡು ಹಾಕಿದ್ದಕ್ಕೆ ಕೆಲವರು ಪ್ರಶ್ನಿಸಿದರೂ ಕ್ಯಾರೆ ಎನ್ನದೆ ನೃತ್ಯ ಮುಂದುವರೆದಿತ್ತು.
ಪೋಟೊ: 26ಎಚ್‌ಎಸ್‌ಡಿ2ಹೊಸದುರ್ಗದಲ್ಲಿ ವಿರಾಟ್ ಹಿಂದೂ ಮಹಾಸಾಗರ ಗಣಪತಿ ವಿಸರ್ಜನಾ ಮಹೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು.
--ಪೋಟೋ: 26ಎಚ್‌ಎಸ್‌ಡಿ4
ಹೊಸದುರ್ಗದಲ್ಲಿ ವಿರಾಟ್ ಹಿಂದೂ ಮಹಾಸಾಗರ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಜನಸ್ತೋಮ