ಹಿಂದೂ- ಮುಸ್ಲಿಂ ಒಟ್ಟಾಗಿ ಇಲ್ಲಿ ರಾಮೋತ್ಸವ!

| Published : Jan 22 2024, 02:17 AM IST

ಸಾರಾಂಶ

ಇದೀಗ ಶ್ರೀರಾಮಮಂದಿರದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗ್ರಾಮದ ಆಂಜನೇಯ ದೇವಾಲಯದಲ್ಲಿ ರಾಮೋತ್ಸವ ಆಚರಿಸಲಾಗುತ್ತಿದೆ. ಇದನ್ನು ಕೂಡ ಕೋಮುಸೌಹಾರ್ದದೊಂದಿಗೆ ಎಲ್ಲರೂ ಒಟ್ಟಾಗಿ ಆಚರಿಸುತ್ತಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ರಾಮೋತ್ಸವವನ್ನು ಇಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಆಚರಿಸುತ್ತಿದ್ದಾರೆ. ರಾಮೋತ್ಸವದಂಗವಾಗಿ ಗ್ರಾಮದಲ್ಲಿ ನಡೆಯಲಿರುವ ಅನ್ನಸಂತರ್ಪಣೆಯ ಜವಾಬ್ದಾರಿ ಸಂಪೂರ್ಣ ಮುಸ್ಲಿಮರದ್ದೇ..!

ಇದು ತಾಲೂಕಿನ ಹಳ್ಯಾಳ ಗ್ರಾಮದ ವಿಶೇಷ. ಹಳ್ಯಾಳ ಗ್ರಾಮ 800 ಮನೆಗಳಿರುವ ಸುಮಾರು 4.5ಯಿಂದ 5 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ. ಇದರಲ್ಲಿ ಸರಿಸುಮಾರು 250ರಷ್ಟು ಮನೆಗಳು ಮುಸ್ಲಿಂ ಸಮುದಾಯಕ್ಕೆ ಸೇರಿವೆ. ಮುಸ್ಲಿಂ ಜನಸಂಖ್ಯೆ ಸರಿಸುಮಾರು 1500. ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಅತ್ಯಂತ ಅನ್ಯೋನ್ಯವಾಗಿ ಇದೆ.

ಇದೀಗ ರಾಮೋತ್ಸವ: ಇದೀಗ ಶ್ರೀರಾಮಮಂದಿರದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗ್ರಾಮದ ಆಂಜನೇಯ ದೇವಾಲಯದಲ್ಲಿ ರಾಮೋತ್ಸವ ಆಚರಿಸಲಾಗುತ್ತಿದೆ. ಇದನ್ನು ಕೂಡ ಕೋಮುಸೌಹಾರ್ದದೊಂದಿಗೆ ಎಲ್ಲರೂ ಒಟ್ಟಾಗಿ ಆಚರಿಸುತ್ತಿದ್ದಾರೆ. ರಾಮೋತ್ಸವ ಹಿನ್ನೆಲೆಯಲ್ಲಿ ಜ.22ರಂದು ಗ್ರಾಮದಲ್ಲಿ ಬೆಳಗ್ಗೆ 6ಗಂಟೆಗೆ ಆಂಜನೇಯ ದೇವಾಲಯದಲ್ಲಿ ಅಭಿಷೇಕ, ಶ್ರೀರಾಮಭಜನೆ, ಬಳಿಕ ಮಕ್ಕಳಿಂದ ಶ್ರೀರಾಮನ ಪಟ್ಟಾಭಿಷೇಕ ಎಂಬ ರೂಪಕ ಪ್ರದರ್ಶನ ನಡೆಯಲಿದೆ. ತದನಂತರ ಅನ್ನಸಂತರ್ಪಣೆ ನಡೆಯಲಿದೆ.

ಮನೆ ಮನೆಯಿಂದ ಕಡುಬು: ಅನ್ನಸಂತರ್ಪಣೆಗೆ ಅನ್ನಸಾಂಬಾರು, ಕಡುಬು, ಕೋಸಂಬರಿ ಪಾನಕ ಹೀಗೆ ಬಗೆ ಬಗೆಯ ಭಕ್ಷ್ಯಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಕಡುಬುನ್ನು ಪ್ರತಿ ಮನೆಯಲ್ಲಿ ತಯಾರಿಸಲಾಗುತ್ತಿದೆ. ಹಿಂದೂ- ಮುಸ್ಲಿಂ ಎಲ್ಲರ ಮನೆಯಲ್ಲೂ ಕಡುಬು ತಯಾರಿಸಿಕೊಂಡು ಇಲ್ಲಿಗೆ ತರಬೇಕು. ಅದನ್ನೇ ನೈವೇದ್ಯ ಮಾಡಿ ಪ್ರಸಾದಕ್ಕೆ ನೀಡಲಾಗುತ್ತಿದೆ. ಸರಿಸುಮಾರು 10 ಸಾವಿರಕ್ಕೂ ಅಧಿಕ ಕಡುಬು ಸಿದ್ಧವಾಗಲಿವೆ. ಕೋಸಂಬರಿ ಹಾಗೂ ಪಾನಕದ ವ್ಯವಸ್ಥೆಯನ್ನು ಗ್ರಾಮದ ಮಹಿಳಾ ಒಕ್ಕೂಟದವರು ನಿರ್ವಹಿಸುತ್ತಿದ್ದಾರೆ.

ಮುಸ್ಲಿಮರಿಂದ ಅನ್ನಸಂತರ್ಪಣೆ: ಊರಲ್ಲಿರುವ ಮುಸ್ಲಿಂ ಸಮುದಾಯದವರೆಲ್ಲ ಸೇರಿಕೊಂಡು ಅನ್ನ, ಸಾಂಬಾರಿನ ವ್ಯವಸ್ಥೆ ಮಾಡಿದ್ದಾರೆ. 2 ಕ್ವಿಂಟಲ್‌ ಅಕ್ಕಿ ಅನ್ನ, ಅದಕ್ಕೆ ಬೇಕಾಗುವಷ್ಟು ಸಾಂಬಾರು ಮಾಡುವ ಜವಾಬ್ದಾರಿ ಮುಸ್ಲಿಮ ಸಮುದಾಯ ವಹಿಸಿಕೊಂಡಿದೆ. ಅನ್ನ ಸಂತರ್ಪಣೆಗೆ ಯಾರೂ ಹಿಂದೂಗಳು ದುಡ್ಡು ಹಾಕಬೇಡಿ. ನಾವೇ ಹಾಕಿ ಮಾಡುತ್ತೇವೆ ಎಂದು ಮುಸ್ಲಿಂ ಸಮುದಾಯದವರು ಹೇಳಿರುವುದುಂಟು. ಅದಕ್ಕೆ ತಕ್ಕಂತೆ ಎಲ್ಲವನ್ನು ಸಿದ್ಧತೆ ಮಾಡಿಕೊಂಡಿದ್ದಾರೆ.

ಪ್ರತಿ ಕಾರ್ಯಕ್ರಮದಲ್ಲೂ ಮುಸ್ಲಿಂ ಸಮುದಾಯ ಸಾಥ್‌ ನೀಡುತ್ತಿದೆ. ದೇವಸ್ಥಾನ ಸ್ವಚ್ಛ ಗೊಳಿಸುವ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯ ಭಾಗವಹಿಸಿರುವುದು ವಿಶೇಷ.

ರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿರುವುದು ಒಂದೆಡೆಯಾದರೆ, ಹಳ್ಯಾಳದಲ್ಲಿನ ಸಂಭ್ರಮ ಹಿಂದೂ- ಮುಸ್ಲಿಮರಲ್ಲಿನ ಸಹೋದರತೆ, ಕೋಮು ಸೌಹಾರ್ದತೆಯಿಂದ ಕೂಡಿರುವುದು ವಿಶೇಷವಾಗಿದೆ. ಈ ಮೂಲಕ ಇಡೀ ದೇಶಕ್ಕೆ ಮಾದರಿಯಾದಂತಾಗಿದೆ.

ಬರೀ ಇದಷ್ಟೇ ಅಲ್ಲ: ಈ ಗ್ರಾಮದಲ್ಲಿ ಬರೀ ರಾಮೋತ್ಸವ ಅಷ್ಟೇ ಅಲ್ಲ. ಪ್ರತಿಯೊಂದು ಹಬ್ಬ ಹರಿದಿನವನ್ನೂ ಎರಡು ಕೋಮಿನವರು ಒಟ್ಟಾಗಿ ಆಚರಿಸುವುದು ವಿಶೇಷ. ಮುಸ್ಲಿಂ ಸಮುದಾಯದ ಮೋಹರಂ, ಸೈಯದ್‌ ಶಾವಲಿ ದರ್ಗಾದ ಉರೂಸ್‌, ರಂಜಾನ್‌, ಹಿಂದೂ ಸಮುದಾಯದ ಗಣೇಶ ಚತುರ್ಥಿ, ಯುಗಾದಿ, ರೇಣುಕಾಚಾರ್ಯ ಮಠದ ಜಾತ್ರೆ, ದೀಪಾವಳಿ ಹೀಗೆ ಎಲ್ಲ ಹಬ್ಬಗಳನ್ನು ಕೋಮುಸೌಹಾರ್ದತೆಯಿಂದಲೇ ಆಚರಿಸುವುದು ವಿಶೇಷ.

ಅವರ ರಂಜಾನ್‌ಗೆ ಪ್ರತಿದಿನ ರೋಜಾ ಬಿಡುವ ವೇಳೆ ಖರ್ಜೂರ್‌, ಬಾಳೆಹಣ್ಣು ಕಳುಹಿಸುತ್ತಾರೆ. ಜತೆಗೆ ದರ್ಗಾದ ಉರೂಸ್‌ಗೆ ಹಿಂದೂಗಳು ಅನ್ನಸಂತರ್ಪಣೆ ವ್ಯವಸ್ಥೆ ಮಾಡುತ್ತಾರೆ. ಇವರ ರೇಣುಕಾಚಾರ್ಯ ಜಾತ್ರೆ, ಗಣೇಶ ಚತುರ್ಥಿಗೆ ಮುಸ್ಲಿಂ ಸಮುದಾಯದವರು ಅನ್ನಸಂತರ್ಪಣೆ ವ್ಯವಸ್ಥೆ ಮಾಡುತ್ತಾರೆ. ಹೀಗೆ ಪ್ರತಿಯೊಂದು ಹಬ್ಬವೂ ಇಲ್ಲಿ ಕೋಮುಸೌಹಾರ್ದತೆಯಿಂದ ನಡೆಯುತ್ತದೆ.

ನಮ್ಮಲ್ಲಿ ಯಾವ ಭೇದ ಭಾವವೂ ಇಲ್ಲ. ಎಲ್ಲ ಹಬ್ಬಗಳನ್ನು ನಾವು ಸೇರಿಕೊಂಡೇ ಆಚರಿಸುತ್ತೇವೆ. ರಾಮೋತ್ಸವದಲ್ಲಿ ಅನ್ನಸಂತರ್ಪಣೆ ಜವಾಬ್ದಾರಿಯನ್ನು ಮುಸ್ಲಿಂ ಸಮುದಾಯದವರೇ ವಹಿಸಿಕೊಂಡಿದ್ದಾರೆ ಎಂದು

ಗ್ರಾಪಂ ಸದಸ್ಯ ಮಂಜುನಾಥ ನಾಗನಗೌಡರ ಹೇಳಿದ್ದಾರೆ.

ನಾವು ಹಿಂದೂ- ಮುಸ್ಲಿಂ ಅಣ್ಣ ತಮ್ಮಂದಿರರಂತೆ ಇದ್ದೇವೆ. ಅವರೊಂದಿಗೆ ನಾವು ನಮ್ಮೊಂದಿಗೆ ಅವರು ಎಲ್ಲರೂ ಸೇರಿಕೊಂಡೇ ಬದುಕು ಸಾಗಿಸುತ್ತಿದ್ದೇವೆ. ನಮ್ಮ ಉರೂಸ್‌ ಇದ್ದಾಗ ಅವರು ಅನ್ನಸಂತರ್ಪಣೆ ಮಾಡುತ್ತಾರೆ. ರಾಮೋತ್ಸವಕ್ಕೆ ನಾವು ಮಾಡುತ್ತಿದ್ದೇವೆ ಎಂದು ಗ್ರಾಮದ ಮುಸ್ಲಿಂ ಸಮುದಾಯದ ಮುಖಂಡ ಖಾದರಸಾಬ ಹುಚ್ಚುಸಾಬನವರ ಹೇಳಿದ್ದಾರೆ.