ಉರುಸ್‌ನಲ್ಲಿ ಸುತ್ತಾಡಿಕೊಂಡು ಬರಲೆಂದು ಪಟ್ಟಣದ ದಿರೀಡ್ ನಗರದ 3 ಜನ ಹಿಂದೂ ಹುಡುಗರು, ಒಬ್ಬ ಹುಡುಗಿ ಮತ್ತು ಇಬ್ಬರು ಮುಸ್ಲಿಂ ಸಮುದಾಯದ ಹುಡುಗ, ಹುಡುಗಿ ಒಟ್ಟಾಗಿ ಬಂದಿದ್ದರು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಉರುಸ್‌ನಲ್ಲಿ ಹಿಂದೂಗಳ ಮೇಲೆ ಮುಸ್ಲಿಂ ಸಮುದಾಯದ ಹುಡುಗರ ಗುಂಪೊಂದು ಸುತ್ತುವರಿದು ಹಲ್ಲೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಸಂತೆ ಮೈದಾನದ ಬಳಿ ಇರುವ ದರ್ಗಾದ ಮೈದಾನದಲ್ಲಿ ನಡೆಯುತ್ತಿರುವ ಉರುಸ್‌ನಲ್ಲಿ ಸುತ್ತಾಡಿಕೊಂಡು ಬರಲೆಂದು ಪಟ್ಟಣದ ದಿರೀಡ್ ನಗರದ 3 ಜನ ಹಿಂದೂ ಹುಡುಗರು, ಒಬ್ಬ ಹುಡುಗಿ ಮತ್ತು ಇಬ್ಬರು ಮುಸ್ಲಿಂ ಸಮುದಾಯದ ಹುಡುಗ, ಹುಡುಗಿ ಒಟ್ಟಾಗಿ ಬಂದಿದ್ದರು. ಆಗ ಮುಸ್ಲಿಂ ಸಮುದಾಯದ 20 ಹುಡುಗರು ಬಂದು ಬುರುಕ ಹಾಕಿಕೊಂಡಿದ್ದ ಹುಡುಗಿಯು ಹಿಂದೂ ಹುಡುಗಿಯಾಗಿರಬೇಕು ಬುರಕ ಹಾಕಿಕೊಂಡು ಬಂದಿದ್ದಾರೆಂದು ಅನುಮಾನಗೊಂಡು ಬುರುಕ ತೆಗೆಸಿ ನೀವು ಯಾವ ಜಾತಿ, ನಿನ್ನ ಆಧಾರ್ ಕಾರ್ಡ್ ತೋರಿಸು ಎಂದು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ.ಇವರಿಬ್ಬರ ಜೊತೆಗೆ ಬಂದಿದ್ದ ಹಿಂದೂ ಹುಡುಗರು ಮಧ್ಯ ಪ್ರವೇಶ ಮಾಡಿ ಯಾವ ಕಾರಣಕ್ಕೆ ಹಲ್ಲೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಅವರ ಮೇಲೂ ಪುಂಡರ ಗುಂಪು ಹಲ್ಲೆ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಉರುಸ್‌ನಲ್ಲಿ ಈ ವಿಷಯ ಕಾಳ್ಗೀಚ್ಚಿನಂತೆ ಹರಡಿತು. ಹಿಂದೂ ಜಾಗರಣ ವೇದಿಕೆ, ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಜಮಾಯಿಸಿದರು. ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದಾಗ ಸುದ್ದಿ ತಿಳಿದು ಸ್ಥಳಕ್ಕೆ ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಬಂದು ಪರಿಸ್ಥಿತಿಯಲ್ಲಿ ತಿಳಿಗೊಳಿಸಿದರು.ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಅಬು ಸುಲ್ತಾನ್, ನೂರ್ ಅಹ್ಮದ್, ಮೊಹಮದ್ ನೈದ್, ಅಭಿದ್ ಅಹಮದ್ ಸೇರಿದಂತೆ 10 ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಲ ಮುಸ್ಲಿಂ ನಾಯಕರು ವಿಷಯವನ್ನು ದೊಡ್ಡದಾಗಿ ಬಿಂಬಿಸುವುದು ಬೇಡವೆಂದು ರಾಜಿ ಸಂಧಾನ ಮಾಡಿಸಲು ಯತ್ನಿಸಿದರೂ ಇದಕ್ಕೆ ಹಿಂದೂ ಸಂಘಟನೆಗಳ ಮುಖಂಡರು ಒಪ್ಪಲಿಲ್ಲ. ಹಲ್ಲೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಪಟ್ಟುಹಿಡಿದಿದ್ದರಿಂದ 10 ಯುವಕರ ಮೇಲೆ ಪ್ರಕರಣ ದಾಖಲಾಗಿದೆ.