ಸಾರಾಂಶ
ಹಿಂದೂ-ಮುಸ್ಲಿಂ ಯುವಕರು ಒಟ್ಟಾಗಿ ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ನಗರದ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಇಳಕಲ್ಲ
ಹಿಂದೂ-ಮುಸ್ಲಿಂ ಯುವಕರು ಒಟ್ಟಾಗಿ ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ನಗರದ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.ನಗರದ ಅಲಂಪೂರ ಪೇಟೆಯ ಗಜಾನನ ಸಮಿತಿಯವರು ಗಣಪತಿ ಮೂರ್ತಿ ಸ್ಥಾಪನೆಗೆ ಚಿಂತನೆ ಮಾಡುತ್ತಿರುವಾಗ ಅದೇ ಕಾಲೋನಿಯ ಮುಸ್ಲಿಂ ಯುವಕರು ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ನಾವೂ ದೇಣಿಗೆ ಕೊಡುತ್ತೇವೆ. ಉತ್ಸವದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಎರಡೂ ಸಮುದಾಯದ ಯುವಕರು ಸೇರಿಗೆ ಗಣೇಶ ಮಂಟಪ ಹಾಕಲು ತಯಾರಿ ನಡೆಸಿದರು. ಹಿಂದು ಯುವಕರು ಮುಸ್ಲಿಮರು ಟೋಪಿ ಹಾಕಿ ಹಣೆಗೆ ಸಿಂಧೂರ ತಿಲಕ ಇಟ್ಟುಕೊಂಡರು. ಮುಸ್ಲಿಂ ಯುವಕರು ಕೊರಳಲ್ಲಿ ಕೇಸರಿ ಶಾಲು ಹಾಕಿಕೊಂಡು ಅದ್ಧೂರಿ ಮೆರವಣಿಗೆ ಮೂಲಕ ಗಣೇಶ ಮೂರ್ತಿ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರು.
ಹಿಂದು ಸಮುದಾಯದವರು ರಂಜಾನ್ ಹಬ್ಬಕ್ಕೆ ಮುಸ್ಲಿಮರ ಮನೆಗೆ ಹೋಗಿ ಸುರಕುರಮಾ ಕುಡಿದು ಬರುತ್ತಾರೆ. ಮುಸ್ಲಿಮ ಯುವಕರು ಉಗಾದಿ ಹಬ್ಬಕ್ಕೆ ಹಿಂದುಗಳ ಮನೆಗೆ ಹೋಗಿ ಬೇವು ಬೆಲ್ಲ ಸವಿಯುತ್ತಾರೆ. ಇಳಕಲ್ಲ ಮಹಾಂತಪ್ಪನ ಗದ್ದುಗೆಗೆ ಮುಸ್ಲಿಂ ಯುವಕರು ಹೋಗಿ ಕಾಯಿ ಒಡಿಸಿದರೆ, ಹಿಂದು ಯುವಕರು ಮುರ್ತುಜಾ ಖಾದ್ರಿ ದರ್ಗಾಕ್ಕೆ ಹೋಗಿ ಸಕ್ಕರೆ ಕೊಟ್ಟು ಬರುತ್ತಾರೆ. ಹೀಗಾಗಿ ಇಳಕಲ್ಲ ನಗರ ಹಿಂದೂ-ಮುಸ್ಲಿಮರ ಧರ್ಮಿಯರ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದಾರೆ.