ಹಿಜಾಬ್‌ ಹಿಂಪಡೆದರೆ ಶಾಲೆ ಕೇಸರಿಮಯ: ಶರಣ್‌ ಪಂಪ್‌ವೆಲ್‌

| Published : Dec 24 2023, 01:45 AM IST

ಹಿಜಾಬ್‌ ಹಿಂಪಡೆದರೆ ಶಾಲೆ ಕೇಸರಿಮಯ: ಶರಣ್‌ ಪಂಪ್‌ವೆಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಿಜಾಬ್‌ ನಿಷೇಧ ಆದೇಶವನ್ನು ವಾಪಸ್‌ ಪಡೆಯಲಾಗುವುದು ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಮಂಗಳೂರು: ರಾಜ್ಯದಲ್ಲಿ ಹಿಜಾಬ್‌ ನಿಷೇಧವನ್ನು ಸರ್ಕಾರ ವಾಪಸ್‌ ಪಡೆದರೆ ಶಾಲಾ ಕಾಲೇಜು ಕೇಸರಿಮಯವಾಗಲಿದೆ ಎಂದು ವಿಶ್ವಹಿಂದು ಪರಿಷತ್‌ ಎಚ್ಚರಿಕೆ ನೀಡಿದೆ.

ಹಿಜಾಬ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿರುವ ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌, ಇದರಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆ. ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತಾಂಧತೆಯ ವಿಷ ಬೀಜವನ್ನು ಬಿತ್ತಬೇಡಿ ಎಂದು ಶರಣ್‌ ಪಂಪ್‌ವೆಲ್‌ ಪ್ರತಿಕ್ರಿಯಿಸಿದ್ದಾರೆ.

ಸಮವಸ್ತ್ರ ಸಂಹಿತೆಗೆ ಸರ್ಕಾರವೇ ಅಡ್ಡಿ: ಡಾ.ಭರತ್‌ ಶೆಟ್ಟಿ-

ಶಾಲಾ ಕಾಲೇಜುಗಳು ರೂಪಿಸಿಕೊಂಡಿರುವ ಶಿಸ್ತುಬದ್ಧ ಸಮವಸ್ತ್ರ ಸಂಹಿತೆಗೆ ಸರ್ಕಾರವೇ ಅಡ್ಡಗಾಲು ಹಾಕುತ್ತಿರುವುದು ವಿಷಾದನೀಯ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಹೇಳಿದ್ದಾರೆ.ಮಂಗಳೂರಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹಿಜಾಬ್ ಧರಿಸಲು ಶಾಲಾ ಕೊಠಡಿ ಒಳಗೆ ಅನುಮತಿ ನೀಡುವುದಾದರೆ ಕೇಸರಿ ಶಾಲು ಧರಿಸಿ ಹಿಂದು ವಿದ್ಯಾರ್ಥಿಗಳು ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು ಕ್ಯಾಂಪಸ್‌ಗಳಲ್ಲಿ ವಸ್ತ್ರ ಸಂಹಿತೆ ಕುರಿತಂತೆ ಸುಧೀರ್ಘ ಹೋರಾಟ ವಿವಿಧ ವಿದ್ಯಾರ್ಥಿ ಸಂಘಟನೆಗಳ ನಡುವೆ ರೂಪುಗೊಳ್ಳಬಹುದು ಎಂದಿರುವ ಶಾಸಕ ಡಾ.ಭರತ್ ಶೆಟ್ಟಿ, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತನ್ನ ಆಲೋಚನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಕೇಸರಿ ಶಾಲಿಗೆ ಬೆಂಬಲ: ಶಾಸಕ ಕಾಮತ್‌-

ಪ್ರಕರಣ ಕೋರ್ಟ್‌ನಲ್ಲಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. ಇದು ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣವಾಗಿದೆ. ಇದನ್ನು ಜಾರಿಗೆ ತಂದರೆ, ಶಿಕ್ಷಣ ಸಂಸ್ಥೆಗಳಲ್ಲಿ ಕೇಸರಿ ಶಾಲು ಧಾರಣೆಯನ್ನು ಬಿಜೆಪಿ ಬೆಂಬಲಿಸಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಎಚ್ಚರಿಸಿದ್ದಾರೆ.ಮಂಗಳೂರಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹಿಜಾಬ್‌ನ್ನು ವಿವಾದವಾಗಿ ಮಾಡಿದ ನಿಷೇಧಿತ ಪಿಎಫ್‌ಐ ಸಂಘಟನೆಯವರು ಈಗ ಕಾಂಗ್ರೆಸ್‌ ಜತೆ ಗುರುತಿಸಿಕೊಂಡು ‘ಬಿ’ ಟೀಂ ಎನಿಸಿಕೊಂಡಿದ್ದಾರೆ. ಸರ್ಕಾರ ಅಭಿವೃದ್ಧಿ ಕಾರ್ಯ ನಡೆಸುವುದು ಬಿಟ್ಟು ವಿವಾದಿತ ವಿಚಾರಗಳನ್ನು ಕೆಣಕುತ್ತಿದೆ. ಎಸ್‌ಸಿ ಎಸ್‌ಟಿ ಮೀಸಲು ನಿಧಿಯನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವರ್ಗಾಯಿಸುವ ಮೂಲಕ ಸಮುದಾಯಗಳ ನಡುವೆ ತಾರತಮ್ಯ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು.ಯುನಿಫಾರಂ ಗತಿ ಏನು?:ಶಾಲಾ ಕಾಲೇಜುಗಳಲ್ಲಿ ಸಮಾನತೆ ಸಲುವಾಗಿ ಸಮವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಮತ್ತೆ ಹಿಜಾಬ್‌ ಧರಿಸುವುದಾದರೆ, ಸಮವಸ್ತ್ರ ನೀತಿಗೆ ಅರ್ಥ ಏನು? ಹಿಂದೆ ಬಿಜೆಪಿ ಸರ್ಕಾರ ಸಮವಸ್ತ್ರ ನೀತಿ ಜಾರಿಗೆ ತರುವ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಕಾಯ್ದುಕೊಂಡಿತ್ತು. ಈಗ ಏಕಾಏಕಿ ಕಾಂಗ್ರೆಸ್‌ ಸರ್ಕಾರ ಶೈಕ್ಷಣಿಕ ಶಿಸ್ತನ್ನು ಹಾಳು ಮಾಡಲು ಹೊರಟಿದೆ ಎಂದರು.ಪರೀಕ್ಷಾ ಕೊಠಡಿಯಲ್ಲಿ ಮುಸ್ಲಿಮ್‌ ವಿದ್ಯಾರ್ಥಿಗಳಿಗೆ ಮಾತ್ರ ಹಿಜಾಬ್ ರಿಯಾಯ್ತಿ ನೀಡುವುದೇ ಮೊದಲಾದ ಕಾಂಗ್ರೆಸ್‌ನ ಧೋರಣೆಯನ್ನು ತೀವ್ರವಾಗಿ ವಿರೋಧಿಸಿ ಹೋರಾಟ ನಡೆಸಲಾಗುವುದು ಎಂದರು.ಸ್ಪೀಕರ್‌ ಖಾದರ್‌ ನಿಲುವು ಏನು?ಕಳೆದ ಬಾರಿ ಹಿಜಾಬ್‌ ವಿವಾದ ತಲೆದೋರಿದಾಗ ಶಾಸಕರಾಗಿದ್ದ ಯು.ಟಿ.ಖಾದರ್‌ ಅವರು ಶೈಕ್ಷಣಿಕ ಶಿಸ್ತು ಕಾಪಾಡುವುದು ಮುಖ್ಯ. ಹೈಕೋರ್ಟ್‌ ತೀರ್ಪನ್ನು ಪಾಲಿಸಲೇ ಬೇಕು ಎಂದು ಹಿಜಾಬ್‌ ರದ್ಧತಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಈಗ ಹೈಕೋರ್ಟ್‌ ತೀರ್ಪಿಗೂ ಮುನ್ನವೇ ಸಿಎಂ ಸಿದ್ದರಾಮಯ್ಯ ಹಿಜಾಬ್ ಜಾರಿಗೊಳಿಸುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಈಗ ಸ್ಪೀಕರ್ ಆಗಿರುವ ಯು.ಟಿ.ಖಾದರ್ ಏನು ಹೇಳುತ್ತಾರೆ. ಹಾಗಾದರೆ ಖಾದರ್‌ ಹಾಗೂ ಸಿದ್ದರಾಮಯ್ಯ ನಿಲುವು ಬೇರೆ ಬೇರೆಯೇ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಪ್ರಶ್ನಿಸಿದರು.