ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಅಂತಾರಾಷ್ಟ್ರೀಯ ಮಟ್ಟದ ದುಷ್ಟಶಕ್ತಿಗಳ ಪಿತೂರಿ ಜೊತೆ ಸೇರಿಕೊಂಡಿರುವ ರಾಜ್ಯ ಸರ್ಕಾರ ಧರ್ಮಸ್ಥಳ ಹಾಗೂ ಹಿಂದೂಗಳ ಇತರೆ ಶ್ರದ್ಧಾ ಕೇಂದ್ರಗಳನ್ನು ಹಾಳು ಮಾಡುವ ದುಸ್ಸಾಹಸಕ್ಕೆ ಕೈಹಾಕಿದೆ. ಇದರ ದುಷ್ಪರಿಣಾಮವನ್ನು ಎದುರಿಸಲು ಅಂತಿಮ ಘಟ್ಟದಲ್ಲಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ ಎಚ್ಚರಿಕೆ ನೀಡಿದರು.ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಜಗತ್ತಿನ ಅನೇಕ ದೇಶಗಳು ಭಾರತ ಬೆಳೆಯುವುದನ್ನು ಸಹಿಸದೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಇದರ ವಿರುದ್ಧವಾಗಿ ನಮ್ಮ ದೇಶ ನಮ್ಮ ಹೆಮ್ಮೆ ಎಂದು ಪ್ರತಿ ಮನೆಯಲ್ಲಿ ತಿರಂಗವನ್ನು ಆಗಸ್ಟ್ ೧೩, ೧೪, ೧೫ ಈ ಮೂರು ದಿನಗಳ ಕಾಲ ಹಾರಿಸುವ ಉದ್ದೇಶದಿಂದ ಚಾಲನೆ ಕೊಡಲಾಗಿದೆ. ಸ್ವಾತಂತ್ರ ದಿನಾಚರಣೆಯಂದು ವೀರ ಯೋಧರಿಗೆ ಸಮರ್ಪಣೆ ಮಾಡಲಾಗುವುದು ಎಂದರು.
ಹಾವೇರಿಯಲ್ಲಿ ವ್ಯಕ್ತಿಯೊಬ್ಬರು ಬಸ್ ಹತ್ತಲಾಗದೇ ಜಾರಿ ಬಿದ್ದು ಆಸ್ಪತ್ರೆಯಲ್ಲಿದ್ದಾರೆ. ನಾಗರಿಕರಾಗಿ ನಾವು ನ್ಯಾಯವಾಗಿ ಬಸ್ಸಿನಲ್ಲಿ ಓಡಾಡಲು ಆಗದ ಸ್ಥಿತಿಯನ್ನು ರಾಜ್ಯದಲ್ಲಿ ಸಿದ್ದರಾಮಯ್ಯ ತಂದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಿದ್ದರಾಮಯ್ಯ ಸರ್ಕಾರ ಪುಂಡ ಪೋಕಿರಿಗಳಿಗೆ ಅಡವಿಟ್ಟಿದೆ. ಹಾಸನದಂತಹ ಊರಿನಲ್ಲಿ ಪುಡಾರಿಗಳು ರಸ್ತೆ ಮೇಲೆ ಲಾಂಗು, ಮಚ್ಚು ಇಟ್ಟುಕೊಂಡು ಓಡಾಡುತ್ತಿದ್ದಾರೆ, ಯುವಕರಲ್ಲಿ ಗಾಂಜಾ ಸೇವನೆ ಹೆಚ್ಚುತ್ತಿದೆ, ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಆದರೆ ಯಾವುದೋ ಹುಡುಗ ಮಾಡಿರುವುದಾಗಿ ಸಮಜಾಯಿಷಿ ನೀಡುತ್ತೀರಿ. ಇಂದು ಧರ್ಮಸ್ಥಳದಲ್ಲಿ ೧೬ ಗುಂಡಿಗಳನ್ನು ತೆಗೆದರೂ ನಿಮಗೆ ಬೇಕಾಗಿರುವ ವಿಷಯ ಸಿಕ್ಕಿಲ್ಲ. ಅನಾಮಧೇಯನನ್ನು ಈಗಲೇ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುವ ಧೈರ್ಯ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಯಾವ ಶಕ್ತಿಗಳ ಮುಂದೆ ಮಂಡಿ ಊರಿದ್ದೀರಾ? ಇದರ ದುಷ್ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗೆ ನಿಂತಿರುವ ಸರ್ಕಾರ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿದೆ. ಗುತ್ತಿಗೆ ಮಾಡುವುದಕ್ಕೂ ರಿಸರ್ವೇಶನ್, ಅಲ್ಪಸಂಖ್ಯಾತರ ಮಕ್ಕಳು ಮಾತ್ರ ವಿದೇಶಿ ವಿದ್ಯಾಭ್ಯಾಸ ಮಾಡಬೇಕಾ? ಬೇರೆಯವರಿಗೆ ಅವಕಾಶ ಇಲ್ಲವೇ? ಒಂದು ಸಮಾಜದ ಓಲೈಕೆ ಈ ಸರ್ಕಾರದ್ದಾಗಿದೆ. ಯಾವ ಅಭಿವೃದ್ಧಿಯೂ ಆಗುತ್ತಿಲ್ಲ. ಬಿಜೆಪಿ ಒಂದು ವರ್ಷದಲ್ಲಿ ೫೨ ಬಾರಿ ಪ್ರತಿಭಟಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡಲಾಗಿದೆ ಎಂದು ರಾಜ್ಯ ಸರ್ಕಾರದ ಹಗರಣಗಳ ಬಗ್ಗೆ ವಾಗ್ದಾಳಿ ನಡೆಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿಜೆಪಿ ಉಪಾಧ್ಯಕ್ಷ ಆಡುವಳ್ಳಿ ಪ್ರಕಾಶ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ, ಸಚಿನ್ ನಾಗೇನಹಳ್ಳಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್. ನಾರಾಯಣಗೌಡ, ಯೋಗೇಶ್, ರಾಜಕುಮಾರ್, ಯುವ ಮೋರ್ಚಾ ಉಪಾಧ್ಯಕ್ಷ ಹರ್ಷಿತ್ ಇತರರು ಉಪಸ್ಥಿತರಿದ್ದರು.