ಹಿಂದೂ ಸಮಾಜದ ಕರ್ತವ್ಯದ ನೆನಪಿಗಾಗಿ ಹಿಂದೂ ಸಂಗಮ ಕಾರ್ಯಕ್ರಮ ದೇಶದ ಎಲ್ಲೆಡೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಅಧ್ಯಕ್ಷ ರವೀಂದ್ರ ಪುತ್ತೂರು ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಹಿಂದೂ ಸಮಾಜದ ಕರ್ತವ್ಯದ ನೆನಪಿಗಾಗಿ ಹಿಂದೂ ಸಂಗಮ ಕಾರ್ಯಕ್ರಮ ದೇಶದ ಎಲ್ಲೆಡೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಅಧ್ಯಕ್ಷ ರವೀಂದ್ರ ಪುತ್ತೂರು ಹೇಳಿದರು.

ಕುಶಾಲನಗರದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಆಶ್ರಯದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಸಮಾಜದಲ್ಲಿ ಪಂಚ ಪರಿವರ್ತನೆಗಳ ಅಗತ್ಯತೆ ಇದ್ದು, ಸಾಮಾಜಿಕ ಮೌಲ್ಯಗಳ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಪರಿಸರದ ಸಂರಕ್ಷಣೆ ಸ್ವದೇಶಿ ಭಾವಗಳ ಜಾಗೃತಿ ಹಾಗೂ ನಾಗರಿಕ ಶಿಸ್ತು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾಗಿದೆ. ಶತಮಾನ ಕಂಡ ಆರ್ ಎಸ್ ಎಸ್ ಕನಸು ಕೂಡ ಇದೆ ಆಗಿದೆ ಎಂದು ಹೇಳಿದರು.

ಜನಸಾಮಾನ್ಯರು ಹಿಂದುತ್ವದ ಜಾಗೃತಿ ಹಾಗೂ ದೇಶ ಭಕ್ತಿ ಹೊಂದುವಂತಾಗಬೇಕು.

ಭಾರತ ಈಗಾಗಲೇ ಸಾಮಾಜಿಕವಾಗಿ ಸಂಪನ್ನತೆ ಹೊಂದಿದ್ದು, ಸಂರಕ್ಷಿತ ರಾಷ್ಟ್ರವಾಗಿದೆ. ಜೊತೆಗೆ ಸಾಮರಸ್ಯದ ಭಾವ ಹೊಂದಿದೆ ಎಂದು ಹೇಳಿದ ಅವರು, ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಕ್ರಾಂತಿಕಾರಿಗಳ ಸ್ಮರಣೆ ಅಗತ್ಯವಾಗಿದೆ ಎಂದರು.

ಕುಶಾಲನಗರದ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಕೃಷಿ ಪತ್ತಿನ ಮತ್ತು ಕೈಗಾರಿಕೋದ್ಯಮಗಳ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಮಾತನಾಡಿ, ಧರ್ಮವನ್ನು ರಾಜಕಾರಣಕ್ಕೆ ಬಳಸಬಾರದು ಎಂದರು. ಕುಶಾಲನಗರ ವಿಶ್ವ ಜ್ಞಾನಿ ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಕುಂಡಾರಿ, ಹಿಂದೂ ಸಂಗಮ ಕಾರ್ಯಕ್ರಮ ಸಂಯೋಜಕ ಜಿ.ಎಲ್. ನಾಗರಾಜ್, ಆಯೋಜನಾ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಇದ್ದರು.

ಕಾರ್ಯಕ್ರಮಕ್ಕೆ ಮುನ್ನ ಕುಶಾಲನಗರ ತಾವರೆಕೆರೆ ಬಳಿಯಿಂದ ಬೃಹತ್ ಶೋಭಾ ಯಾತ್ರೆ ನಡೆಯಿತು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ಶೋಭಾಯಾತ್ರೆಯಲ್ಲಿ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ಶುಭ ಕೋರಿದರು.

ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಮಹಿಳಾ ಸದಸ್ಯರ ತಂಡದಿಂದ ಕಿರು ನಾಟಕದ ಮೂಲಕ ದೇಶಭಕ್ತಿ ಸಂದೇಶ ನೀಡಲಾಯಿತು.

ಇದೇ ಸಂದರ್ಭ ಸಹಸ್ರ ಕಂಠ ಮೂಲಕ ವಂದೇ ಮಾತರಂ ಗೀತೆ ಹಾಡಲಾಯಿತು. ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಸಂಯೋಜಕ ಜಿ.ಎಲ್. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಹಿಂದೂ ಸಂಗಮ ಆಯೋಜನಾ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.