ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮಹತ್ತರವಾದ ವರದಾನವಾಗಿವೆ.
ಕಂಪ್ಲಿ: ತಾಲೂಕಿನ ನಂ. 3 ಸಣಾಪುರ ಗ್ರಾಮದಲ್ಲಿ ಚಿಕ್ಕೇನಕೊಪ್ಪ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಭಾನುವಾರ ಧರ್ಮಜಾಗೃತಿ ಸಮಾರಂಭ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳ ಬೃಹನ್ಮಠದ ಡಾ. ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮಹತ್ತರವಾದ ವರದಾನವಾಗಿವೆ. ಗುರು–ಹಿರಿಯರ ಸಮ್ಮುಖದಲ್ಲಿ, ಸಂಸ್ಕಾರಪೂರ್ಣವಾಗಿ ನಡೆಯುವ ವಿವಾಹಗಳು ದಾಂಪತ್ಯ ಜೀವನಕ್ಕೆ ಭದ್ರತೆ ಹಾಗೂ ಶಾಂತಿ ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಕೇವಲ ಆಕರ್ಷಣೆಗೆ ಒಳಗಾಗಿ ನಡೆಯುವ ಪ್ರೇಮವಿವಾಹಗಳಲ್ಲಿ ಅನೇಕ ಬಾರಿ ವಧುಗಳು ಬಲಿಪಶುಗಳಾಗುತ್ತಿರುವುದು ದುಃಖಕರ ಸಂಗತಿ.ವರದಕ್ಷಿಣೆ ಪಿಡುಗು, ಅಜ್ಞಾನದಿಂದ ನಡೆಯುವ ಬಾಲ್ಯವಿವಾಹಗಳು ಹಾಗೂ ಗುರು–ಹಿರಿಯರ ಅಣತಿಯನ್ನು ಮೀರಿ ನಡೆಯುವ ವಿವಾಹಗಳಿಂದಾಗಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಮಾಜಕ್ಕೆ ಆತಂಕಕಾರಿಯಾಗಿದೆ ಎಂದು ಎಚ್ಚರಿಸಿದರು.
ಸಮಾಜದ ಸ್ಥಿರತೆ ಹಾಗೂ ಧಾರ್ಮಿಕ ಜಾಗೃತಿಗಾಗಿ ಹಿಂದೂ ಕುಟುಂಬ ವ್ಯವಸ್ಥೆ ಬಲವಾಗಿರಬೇಕು. ಹಿಂದೂಗಳು ಅಲ್ಪಸಂಖ್ಯಾತರಾಗುವುದನ್ನು ಹಾಗೂ ಅಲ್ಪಸಂಖ್ಯಾತರು ಬಹುಸಂಖ್ಯಾತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಿಂದೂ ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಇದಕ್ಕೂ ಮುನ್ನ ಗ್ರಾಮದಲ್ಲಿ ಚಿಕ್ಕೇನಕೊಪ್ಪ ಚನ್ನವೀರ ಶರಣರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಡೊಳ್ಳು, ವಾದ್ಯಘೋಷಗಳೊಂದಿಗೆ ನಡೆದ ಮೆರವಣಿಗೆಗೆ ಗ್ರಾಮಸ್ಥರು ಭಕ್ತಿಯಿಂದ ಸಾಕ್ಷಿಯಾದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ಜೋಡಿಗಳು ವಿಧಿವಿಧಾನಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವೀರಭದ್ರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಷ್ಟೂರಿನ ಹಿರೇಮಠದ ಈಶ್ವರಯ್ಯತಾತ ಆಶೀರ್ವಚನ ನೀಡಿದರು. ಪ್ರಮುಖರಾದ ಜಿ. ಈಶಣ್ಣ, ಮರಿಶಾಂತ ಮುಷ್ಟೂರು, ಚನ್ನಪ್ಪ, ಕನಕಗಿರಿ ಬಸವರಾಜ, ಜಿ. ಕುಮಾರಸ್ವಾಮಿ, ಎಂ. ವೀರೇಶ್ ಪಾಟೀಲ್, ಎ. ನಾಗರಾಜ, ವೈ. ಮಹಾಂತೇಶ, ಟಿ. ಶರಣಪ್ಪ, ಯು. ಅರುಣಕುಮಾರ್, ಬಳೆ ಮಲ್ಲಿಕಾರ್ಜುನ, ಕೆ. ಬಸವರಾಜ, ವಿ. ಪಂಪನಗೌಡ, ಕೆ. ಚನ್ನಪ್ಪ, ಕೆ. ಭೀಮಣ್ಣ, ವೆಂಕಟರಾಮರಾಜು, ವೈ. ರಮಣಯ್ಯ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.