ಕುಷ್ಟಗಿ: ದೇಶ ಭಕ್ತಿ, ಹಿಂದೂ ಜಾಗೃತಿ ಮೂಡದಿದ್ದಲ್ಲಿ ಮತ್ತೊಮ್ಮೆ ಭಾರತೀಯರು ಗುಲಾಮರಾಗಿ ಬಾಳಬೇಕಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತಿಯ ಪ್ರಚಾರಕ ನರೇಂದ್ರ ಜಿ ಹೇಳಿದರು.

ನಗರದ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ನಡೆದ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೂ ಧರ್ಮದಲ್ಲಿ ಅನೇಕ ಜಾತಿಯತೆ, ಅಸ್ಪೃಶ್ಯತೆ, ಮೇಲು ಕೀಳು ಪದ್ಧತಿಯ ಲಾಭ ಪರಕೀಯರಾದ ಮೋಘಲರು, ಪೋರ್ಚುಗೀಸರು,ಬ್ರೀಟಿಷರು ಸೇರಿದಂತೆ ಅನೇಕರು ಪಡೆದುಕೊಂಡು ನಮ್ಮನ್ನು ಗುಲಾಮರಂತೆ ಕಂಡಿದ್ದಾರೆ. ಆದ ಕಾರಣ ನಾವು ಸಾಮರಸ್ಯದಿಂದ ಬದುಕು ನಡೆಸಿದಾಗ ಮಾತ್ರ ಹಿಂದೂ ಸಮಾಜ ಸುಂದರವಾಗುತ್ತದೆ ಎಂದರು.

ಭಾರತ ಮಾತೆಯ ಮೇಲೆ ಕೆಟ್ಟ ಕಣ್ಣು ಹಾಕಿದವರು ಹಾಗೂ ಹಿಂದೂ ಶ್ರದ್ಧಾ ಕೇಂದ್ರ ನಾಶ ಮಾಡಿದವರು ಜಗತ್ತಿನಲ್ಲಿ ಯಾರು ಉಳಿದಿಲ್ಲ, ದೇಶದಲ್ಲಿ ಅನೇಕ ಸಂಸ್ಕೃತಿಯ ಜನರು ಬದುಕಿ ಬಾಳಿದ್ದಾರೆ. ಅನ್ಯ ಸಂಸ್ಕೃತಿ ಅವನತಿಯಾದರು ನಮ್ಮ ಹಿಂದೂ ಸಂಸ್ಕೃತಿ ಇನ್ನೂ ಉಳಿದಿದೆ ಎಂದರು.

ಇತ್ತೀಚಿಗೆ ನಡೆದ ಮಹಾಕುಂಭಮೇಳದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಾಧು ಸಂತರು ಪಾಲ್ಗೊಂಡಿದ್ದರು. ಸಹಸ್ರಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸಾಧು ಸಂತರು ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಬಿತ್ತನೆ ಮಾಡುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದರು.


ನಮ್ಮ ದೇಶದ ಸಂಸ್ಕೃತಿ ಅನ್ಯ ದೇಶಗಳು ಅಳವಡಿಸಿಕೊಳ್ಳುತ್ತಿದ್ದರೆ ನಾವು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ ಇದನ್ನು ಇಲ್ಲಿಗೆ ನಿಲ್ಲಿಸಬೇಕು ನಮ್ಮ ಭಾರತೀಯ ಸಂಸ್ಕೃತಿ ಬೆಳೆಸಿ ಉಳಿಸಬೇಕು ಎಂದರು.

ಆರ್ ಎಸ್ ಎಸ್ ಸಂಘಟನೆ ನೂರು ವರ್ಷಗಳಿಂದ ಹಿಂದೂಗಳ ಒಗ್ಗಟ್ಟಿಗಾಗಿ ದುಡಿಯುತ್ತಿದ್ದು, ಹಿಂದೂ ಸಮಾಜ ನೇತೃತ್ವದಲ್ಲಿ ಹಿಂದೂಗಳ ಸಂಘಟನೆ ಆಗಬೇಕಿದೆ. ನಮ್ಮ ದೈನಂದಿನ ನಡವಳಿಕೆಗಳಲ್ಲಿ ಹಿಂದೂ ಸಂಸ್ಕೃತಿ ಅಳವಡಿಸಿಕೊಂಡು ಉಳಿದವರಿಗೆ ಜಾಗೃತಿ ಮೂಡಿಸಬೇಕೀದೆ. ಹಿಂದೂ ಧರ್ಮದಲ್ಲಿ ಜನಿಸಿದ ಮಹಾನ್ ಪುರುಷರ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಡಾ. ಗುರುಶಾಂತವೀರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಬೆಕ್ಕಿನಂತೆ ಬದುಕುವದಕ್ಕಿಂತ ಹುಲಿಯಂತೆ ಘರ್ಜಿಸುವ ಮೂಲಕ ಬದುಕು ನಡೆಸಬೇಕು ಎಂದರು.

ಮದ್ದಾನೇಶ್ವರ ಮಠದ ಕರಿಬಸವಶ್ರೀಗಳು ಮಾತನಾಡಿ, ನಮ್ಮ ಮನೆಯಲ್ಲಿನ ಮಕ್ಕಳಲ್ಲಿ ಹಿಂದೂ ಸಂಪ್ರದಾಯ ಕಲಿಸಬೇಕು. ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದ ಅವರು, ಉತ್ತಮ ಶಿಕ್ಷಣ ಮೂಲಕ ಸಂಸ್ಕೃತಿ ಹುಟ್ಟು ಹಾಕಬೇಕು ಎಂದರು.

ಅದ್ಧೂರಿ ಮೆರವಣಿಗೆ:ಹಿಂದೂ ಸಮ್ಮೇಳನದ ಅಂಗವಾಗಿ ನಗರದ ಮದ್ದಾನೇಶ್ವರ ಮಠದಿಂದ ಬೃಹತ್ ಮೆರವಣಿಗೆ ಪ್ರಾರಂಭಗೊಂಡು ಕೋಕಿಲಾ ವೃತ್ತ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಮಾರುತಿ ವೃತ್ತ, ಕನಕದಾಸ ವೃತ್ತದ ಮೂಲಕ ವಾಸವಿ ದೇವಸ್ಥಾನ ತಲುಪಿತು. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ಮಂಡಳಿ, ಡೊಳ್ಳು ಕುಣಿತ, ಚಂಡೆ ವ್ಯಾದ್ಯ, ಚಿಕ್ಕ ಮಕ್ಕಳಿಂದ ಮಹಾಪುರುಷರ ಛದ್ಮವೇಷ, ಸಾರೋಟಿನಲ್ಲಿ ಭಾರತ ಮಾತೆಯ ಚಿತ್ರದೊಂದಿಗೆ ಮೆರವಣಿಗೆ ಮೆರವಣಿಗೆಯಲ್ಲಿ ಚಂಡಿ ವಾದ್ಯಗಳು, ಡೊಳ್ಳು ಕುಣಿತ, ವಾದ್ಯಮೇಳ, ಭಜನೆ ಮೂಲಕ ಬೃಹತ್ ಮೆರವಣಿಗೆ ಅದ್ಧೂರಿಯಾಗಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಡಾ.ಬಸವರಾಜ ಕ್ಯಾವಟರ್, ವಿನಯಕುಮಾರ ಮೇಲಿನಮನಿ, ಕಲ್ಲೇಶ ತಾಳದ, ಜಯತಿರ್ಥ ದೇಸಾಯಿ, ನರಸಿಂಹ ಕಾರಟಗಿ, ವಿರೇಶ ಬಂಗಾರಶೆಟ್ಟರ, ಪರಶುರಾಮ ನಾಗರಾಳ, ಬಸವರಾಜ ಎನ್.ಪಾಟೀಲ, ಕೆ.ಮಹೇಶ, ಮಹಾಂತೇಶ ಬಾದಾಮಿ, ಶಿವುಕುಮಾರ ಗಂಧದಮಠ, ಪ್ರಭಾಕರ ಚಿಣಿ, ಪ್ರಭುಶಂಕರಗೌಡ ಪಾಟೀಲ್,ಬಸವರಾಜ ಹಳ್ಳೂರು, ಮಲ್ಲಣ್ಣ ಪಲ್ಲೆದ, ಅಶೋಕ ಬಳೂಟಗಿ, ಅಮರೇಶ ಶೆಟ್ಟರ ಸೇರಿದಂತೆ ಹಿಂದೂ ಸಮಾಜದವರು, ಯುವಕ ಸಂಘಟನೆ, ನಗರದ ನಾಗರಿಕರು ಮಹಿಳೆಯರು ಇದ್ದರು.

ಕಾರ್ಯಕ್ರಮದಲ್ಲಿ ಶಿವಲೀಲಾ ದಳವಾಯಿ ವಂದೇ ಮಾತರಂ ಗೀತೆ ಹಾಡಿದರು, ಮಹಾಲಿಂಗಪ್ಪ ದೋಟಿಹಾಳ ಸ್ವಾಗತಿಸಿದರು, ಈರಣ್ಣ ಸೊಬರದ ನಿರೂಪಿಸಿದರು, ಶಿವುಕುಮಾರ ಗಂಧದಮಠ. ವೈಯಕ್ತಿಕ ಗೀತೆ ಹಾಡಿದರು. ಸುರೇಶ ಮಂಗಳೂರು ವಂದಿಸಿದರು.