ಸಾರಾಂಶ
ಲವ್ ಜಿಹಾದ್ ಬಲೆಯಲ್ಲಿ ಯುವತಿಯನ್ನು ಕೆಡವಲು ಮುನ್ನಾ ಹಣದ ಆಮಿಷ ತೋರಿಸಿ, ಪರಿಚಯ ಮಾಡಿಕೊಂಡು ಮದುವೆಯಾದ ಅವಳನ್ನು ಅಪಹರಿಸಿಕೊಂಡು ಹೋಗಿದ್ದಾನೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸರು ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು.
ಧಾರವಾಡ:
ಹಿಂದೂ ಮಹಿಳೆಯನ್ನು ಅಪಹರಣದ ಕುರಿತು ಕೇಸ್ ದಾಖಲಿಸದೆ ಮಿಸ್ಸಿಂಗ್ ಕೇಸ್ ಹಾಕಿ, ಒಂದು ತಿಂಗಳು ಕಾಲಹರಣ ಮಾಡಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.ಕೆಲಗೇರಿ ಬಡಾವಣೆಯ ಮದುವೆಯಾದ ಮಹಿಳೆಯರನ್ನು ಮುಸ್ಲಿಂ ಯುವಕ ಮುನ್ನಾ ಅಪಹರಿಸಿಕೊಂಡು ಹೋಗಿರುವ ಕುರಿತು ದೂರು ನೀಡಿದರೂ ಪೊಲೀಸರು ಪ್ರಕರಣವನ್ನು ಕಡೆಗಣಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಪುಂಡ-ಪೋಕರಿಗಳ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಲವ್ ಜಿಹಾದ್ ಬಲೆಯಲ್ಲಿ ಯುವತಿಯನ್ನು ಕೆಡವಲು ಮುನ್ನಾ ಹಣದ ಆಮಿಷ ತೋರಿಸಿ, ಪರಿಚಯ ಮಾಡಿಕೊಂಡು ಮದುವೆಯಾದ ಅವಳನ್ನು ಅಪಹರಿಸಿಕೊಂಡು ಹೋಗಿದ್ದಾನೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸರು ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು, ಅಪಹರಣವಾಗಿರುವ ಮಹಿಳೆಯನ್ನು ಕುಟುಂಬಕ್ಕೆ ಮರಳಿಸಬೇಕು. ಈ ಕೃತ್ಯಕ್ಕೆ ಕಾರಣ ಆಗಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಶ್ರೀರಾಮಸೇನೆ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಶ್ರೀರಾಮಸೇನೆ ಕಾರ್ಯಕರ್ತರು ಎಚ್ಚರಿಸಿದರು.ಹಿಂದೂ ಯುವತಿಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದೆ. ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಕಿಡಿಕಾರಿದರು.