ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಜಗತ್ತಿನಲ್ಲಿ ಧರ್ಮಾಧಾರಿತ ರಾಷ್ಟ್ರ ಇದ್ದರೆ ಅದು ಭಾರತ ಮಾತ್ರ. ಈ ರಾಷ್ಟ್ರದಲ್ಲಿರುವ ಹಿಂದೂ ಧರ್ಮವನ್ನು ಉಳಿಸಬೇಕು, ಬೆಳೆಸಬೇಕು ಎಂದು ಮೇಲುಕೋಟೆ ಜಗದ್ಗುರು ಶ್ರೀ ರಾಮಾನುಜಾಚಾರ್ಯ ಮಹಾಸಂಸ್ಥಾನ ಶ್ರೀ ಯದುಗಿರಿ ಯತಿರಾಜ ಮಠದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಸ್ವಾಮೀಜಿ ಹೇಳಿದರು.ಪಟ್ಟಣದ ಮಹಾಲಕ್ಷ್ಮೀ ದೇವಾಲಯದ ಜೀರ್ಣೋದ್ಧಾರ ಮತ್ತು ನೂತನ ವಿಮಾನ ಗೋಪುರದ ಕುಂಭಾಭಿಷೇಕ ಹಾಗೂ ಲೋಕಾರ್ಪಣೆ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮವನ್ನು ರಕ್ಷಣೆ ಮಾಡುವ ಕೇಂದ್ರಗಳಾಗಿರುವ ದೇವಾಲಯಗಳನ್ನು ನಮ್ಮ ಮನೆಗಳಂತೆ ಕಾಣಬೇಕು. ಯಾವುದೇ ಧರ್ಮ, ಮತ, ಜಾತಿ ಭೇಧವಿಲ್ಲದೇ ಇರುವ ಸ್ಥಳವಾಗಿರುವ ದೇವಾಲಯಗಳಲ್ಲಿ ದೇವರ ಮುಂದೆ ಸರ್ವರೂ ಸಮಾನರು. ಬಡವ, ಶ್ರೀಮಂತ ಎಲ್ಲರೂ ದೇವರ ಮುಂದೆ ಸಮಾನರೇ. ಎಲ್ಲರನ್ನೂ ದೇವರು ಸಮಾನವಾಗಿ ಕಾಣುವನು. ಅವನಿಗೆ ಬೇಕಿರುವುದು ಜನರ ಭಕ್ತಿಯೇ ವಿನಃ ಬೇರೇನನ್ನೂ ಅವನು ಬಯಸನು ಎಂದು ಹೇಳಿದರು.
ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಿರುವ ದೇವಾಲಯಗಳು ಶಿಥಿಲಗೊಂಡಿದ್ದು, ಅವುಗಳನ್ನು ಜೀರ್ಣೋದ್ಧಾರ ಮಾಡುವುದೂ ಸಹ ಒಂದು ಪುಣ್ಯದ ಕಾರ್ಯ. ಶಿಥಿಲಗೊಂಡಿದ್ದ ರಾಜ್ಯದ ಸುಮಾರು ಮುನ್ನೂರ್‍ಕೂ ಹೆಚ್ಚು ದೇವಾಲಯಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀಗಳು ಹೇಳಿದರು.ದೇವಾಲಯಗಳು ಎಷ್ಟು ಮುಖ್ಯವೋ, ದೇಶದ ರೈತರೂ ಅಷ್ಟೇ ಮುಖ್ಯ. ದೇಶದ ರೈತರ ಬದುಕು ಹಸನಾಗಿದ್ದರೆ ಮಾತ್ರ ಇಡೀ ರಾಷ್ಟ್ರ ಸಮೃದ್ದಿಯಾಗಿರುತ್ತದೆ. ರೈತರು ಕಷ್ಟ ಪಟ್ಟು ಬೆಳೆ ಬೆಳೆದು ನೀಡಿದರೆ ಮಾತ್ರ ಜನರ ಹಸಿವು ನೀಗಿಸಲು ಸಾಧ್ಯ. ರೈತರು ಸುಖವಾಗಿರಬೇಕೆಂದರೆ ಉತ್ತಮ ಮಳೆಯಾಗಬೇಕು. ಆಗ ಫಸಲು ಚನ್ನಾಗಿ ಬಂದು ರೈತರ ಬದುಕು ಹಸನಾಗಲಿದೆ ಎಂದು ಹೇಳಿದರು.
ಸುಮಾರು ೧೨೦೦ ವರ್ಷಗಳ ಇತಿಹಾಸ ಇರುವ ಪಟ್ಟಣದ ಬೇಟೆರಾಯಸ್ವಾಮಿಯ ದರ್ಶನ ಪಡೆದರೆ ತಿರುಪತಿಯ ತಿಮ್ಮಪ್ಪಸ್ವಾಮಿ ದರ್ಶನ ಪಡೆದಂತೆಯೇ. ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಸಾಧ್ಯವಾಗದ ಭಕ್ತರು, ಶ್ರೀ ಮಹಾಲಕ್ಷ್ಮೀ ದೇವಿ ಸಮೇತ ಬೇಟೆರಾಯ ಸ್ವಾಮಿಯ ದರ್ಶನವನ್ನು ಕಣ್ಮುಂಬಿಕೊಳ್ಳುವ ಸದಾವಕಾಶವಿದೆ ಎಂದರು.ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ನ ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ್ ಮಾತನಾಡಿ, ನಮ್ಮ ಟ್ರಸ್ಟ್ ಹಾಗೂ ಸರ್ಕಾರದ ಪುರಾತತ್ವ ಇಲಾಖೆಯ ಸಹಯೋಗದಲ್ಲಿ ಸುಮಾರು ೩೦೦ ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಲಾಗಿದೆ. ಪುರಾತನ ದೇವಾಲಯಗಳು ಸೂರ್ಯ, ಚಂದ್ರ ಇರುವರೆಗೂ ಇರಬೇಕು. ಪೂಜೆಗಳು ನಡೆಯಬೇಕು ಎಂದರು.
ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು, ತಾಲೂಕು ದಂಡಾಧಿಕಾರಿ ವೈ.ಎಂ.ರೇಣುಕುಮಾರ್, ಬೇಟೆರಾಯಸ್ವಾಮಿ ದೇವಾಲಯದ ಸಮಿತಿ ಅಧ್ಯಕ್ಷ ಶ್ರೀಧರ್, ಸೂರ್ಯನಾರಾಯಣ್ ಪಂಡಿತ್, ಆರ್ಕಿಟೆಕ್ಟ್ ವಿರೂಪಾಕ್ಷ, ಸೀನಿಯರ್ ಪ್ರಾಜೆಕ್ಟ್ ಆಫೀಸರ್ ರಾಮಮೂರ್ತಿ ಇದ್ದರು. ಶಿಕ್ಷಕ ಚೈತನ್ಯ, ಸುಷ್ಮ ನಿರೂಪಿಸಿದರು.