ಹಿಂದೂ ಧರ್ಮ ರಕ್ಷಣೆಗೆ ಒಂದಾಗಿ: ಸ್ವತಂತ್ರ ಸಿಂಧೆ

| Published : Oct 08 2023, 12:02 AM IST

ಸಾರಾಂಶ

ಹಿಂದೂ ಧರ್ಮ ರಕ್ಷಣೆಗೆ ಒಂದಾಗಿ: ಸ್ವತಂತ್ರ ಸಿಂಧೆ
- ಹುಣಸಗಿಯಲ್ಲಿ ಶೌರ್ಯ ಜಾಗರಣಾ ರಥಯಾತ್ರೆಯ ಭವ್ಯ ಮೆರವಣಿಗೆ ಕನ್ನಡಪ್ರಭ ವಾರ್ತೆ ಹುಣಸಗಿ ನಮ್ಮಲ್ಲಿನ ಸಂಕುಚಿತ ಜಾತಿ ಸಂಕೋಲೆಗಳನ್ನು ಬದಿಗಿಟ್ಟು, ಹಿಂದೂ ಧರ್ಮದ ರಕ್ಷಣೆಗೆ ನಾವೆಲ್ಲಾ ಒಂದಾಗಬೇಕಿದೆ ಎಂದು ಉತ್ತರ ಕರ್ನಾಟಕ ಪ್ರಾಂತದ ಧರ್ಮ ಜಾಗರಣ ಪ್ರಮುಖ ಸ್ವತಂತ್ರ ಸಿಂಧೆ ಹೇಳಿದರು. ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳ ಸಂಚಾಲಿತ ಶೌರ್ಯ ಜಾಗರಣಾ ರಥಯಾತ್ರೆಯ ಭವ್ಯ ಮೆರವಣಿಗೆ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಔರಂಗಜೇಬ್‌ ಸುರಪುರದ ದೊರೆ ರಾಜಾ ಪಿಡ್ಡನಾಯಕರಿಗೆ ಶರಣಾಗತಿ ಪತ್ರ ತನ್ನ ಹಸ್ತ ಸಾಮುದ್ರಿಕೆಯೊಂದಿಗೆ ಬರೆದು ಕೊಟ್ಟಿದ್ದಾನೆ. ಹೀಗಾಗಿ ಸುರಪುರಕ್ಕೆ ಶೂರರ ನಾಡು ಎಂದು ಹೆಸರು ಬಂದಿದೆ ಎಂದರು. ಸನಾತನ ಧರ್ಮವನ್ನು, ಶ್ರದ್ಧಾ ಕೇಂದ್ರಗಳನ್ನು ಎರಡುವರೆ ಸಾವಿರ ವರ್ಷಗಳಿಂದ ನಾಶ ಮಾಡಿದರೂ ಅಧರ್ಮಿಗಳಿಗೆ ಜಯ ಸಿಕ್ಕಿಲ್ಲ. ಆಕ್ರಮಣಕಾರರು ಎಷ್ಟೇ ಅನ್ಯಾಯ ಅತ್ಯಾಚಾರ ಮಾಡಿದರೂ, ಸಂಕಷ್ಟ ಕಾಲದಲ್ಲಿ ಹಿಂದೂ ಶಕ್ತಿಯಾಗಿ ಶಿವಾಜಿ ಮಹಾರಾಜ, ರಾಜಾ ರಾಣಾ ಪ್ರತಾಪ ಸಿಂಹ, ಸುರಪುರ ದೊರೆ ರಾಜಾ ಪಿಡ್ಡನಾಯಕ ಅವರ ರೂಪದಲ್ಲಿ ಉದಯಿಸಿ ಧರ್ಮ ರಕ್ಷಣಾ ಕಾರ್ಯ ಮಾಡಿದ್ದು ನೆನಪಿಸಿಕೊಳ್ಳಬೇಕಾಗುತ್ತದೆ ಎಂದರು. ಲವ್ ಜಿಹಾದ್, ಲ್ಯಾಂಡ್‌ ಮಾಫಿಯಾ, ಕೆಲವು ಪಕ್ಷಗಳ ತುಷ್ಟೀಕರಣದಿಂದ ಹಿಂದೂಗಳಿಗೆ ಸಂಕಷ್ಟ ಎದುರಾಗಿದೆ. ಇದನ್ನು ತಡೆಯಲು ರಾಮಭಕ್ತರಾದ ನಾವೆಲ್ಲ ಜಾಗೃತರಾಗಬೇಕು ಎಂದರು. ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಭಾರತ ಸನಾತನ ಧರ್ಮವನ್ನು ಹೀಯಾಳಿಸುವ ಕೀಳು ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕು. ಸನಾತನವನ್ನು ಡೆಂಘೀ, ಮಲೇರಿಯಾಕ್ಕೆ ಹೋಲಿಸುವ ಅವರ ದೇಹ ಹಾಗೂ ಮಾತಿನಲ್ಲಿ ರೋಗ ಸೇರಿಕೊಂಡಿದೆ. ನಮ್ಮ ಸನಾತನ ಧರ್ಮವನ್ನು ನಾವು ಉಳಿಸೋಣ ಎಂದರು. ಅಗತೀರ್ಥ ರೇವಣಸಿದ್ದ ಮಠದ ಪೂಜ್ಯ ಶಾಂತಮಯ ಸ್ವಾಮಿ ಮಾತನಾಡಿದರು. ಇದಕ್ಕೂ ಮುಂಚೆ ಮಹಾಂತಸ್ವಾಮಿ ವೃತ್ತದಿಂದ ಗಣಪತಿ ಕಟ್ಟೆಯ ಮೂಲಕ ಬಸವೇಶ್ವರ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಿತು. ರಥದಲ್ಲಿನ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗುಳಬಾಳದ ಪೂಜ್ಯರಾದ ಮರಿಹುಚ್ಚೇಶ್ವರ ಸ್ವಾಮಿ, ವಜ್ಜಲ ವಿಠ್ಠಲ ಮಹಾರಾಜರು, ಚನ್ನಬಸವ ಶಿವಾಚಾರ್ಯರು, ವಿದ್ವಾನ್‌ ಸಿದ್ಧಲಿಂಗ ಶಾಸ್ತ್ರಿ ಹಾಗೂ ನೀಲಕಂಠ ಸ್ವಾಮಿ, ರಾಜೆಂದ್ರ ಬಳೆಗಾರ ಸೇರಿದಂತೆ ಇತರರಿದ್ದರು. ವಿನೋದ ದೋರೆ ಸ್ವಾಗತಿಸಿದರು. ಆನಂದ ಬಾರಿಗಿಡದ ನಿರೂಪಿಸಿದರು. ಮಹೇಶ ಸ್ಥಾವರಮಠ ವಂದಿಸಿದರು.