ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೆ.ಆರ್.ಮೊಹಲ್ಲಾ ತೊಗರಿ ಬೀದಿಯಲ್ಲಿ ಪಂಚಮುಖಿ ವಿನಾಯಕ ಯುವಕರ ಬಳಗದ ಯುವಕರು ಹಾಗೂ ಮುಸ್ಲಿಂ ಸ್ನೇಹಿತರ ಒಟ್ಟಾಗಿ ಸೇರಿ ಗಣೇಶ ಹಬ್ಬವನ್ನು ಆಚರಿಸುವ ಮೂಲಕ ಸೌಹಾರ್ದತೆ ಸಂದೇಶ ಸಾರಿದರು.ವಿಘ್ನ ವಿನಾಶಕನಿಗೆ ಒಟ್ಟಾಗಿ ಪೂಜೆ ಸಲ್ಲಿಸುವ ಮೂಲಕ ಮಾದರಿಯಾದ ಯುವಕರು, ಪೂಜೆಯ ಬಳಿಕ ಪ್ರಸಾದ ಹಾಗೂ ನೈವೇದ್ಯವನ್ನು ಪರಸ್ಪರ ತಿನ್ನಿಸಿ ಖುಷಿಪಟ್ಟರು. ಅಲ್ಲದೆ, ಪರಸ್ಪರ ಗಣೇಶ ಹಾಗೂ ಮೊಹರಂ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಹಿಂದೂ- ಮುಸ್ಲಿಂ ಭಾಯಿ ಭಾಯಿ ಎಂಬ ಸಂದೇಶವನ್ನು ರವಾನಿಸಿದರು.
ಈ ವೇಳೆ ಪಂಚಮುಖಿ ವಿನಾಯಕ ಯುವಕರ ಬಳಗದ ಅಧ್ಯಕ್ಷ ರವಿನಂದನ್ ಮಾತನಾಡಿ, ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ದವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ, ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದೆ. ಹೀಗಾಗಿ, ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಿಸಲು ಮುಂದಾಗಬೇಕು ಎಂದರು.ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಜಿ. ರಾಘವೇಂದ್ರ, ಗುಲ್ಸಿಯನ್ ಪಾಷಾ, ಅಮೀನ್, ಕೊಹಿಲ್, ಅಹಮದ್, ಮುಶೀರ್, ಸಲ್ಮಾನ್ ಪಾಷಾ, ಸಮೀರ್, ರವಿತೇಜ, ಗಿರೀಶ್, ಹರ್ಷ, ಸುಭಾಷ್, ಉಮೇಶ್ ಮೊದಲಾದವರು ಇದ್ದರು.
ವಿಶ್ವಪ್ರಜ್ಞ ಶಾಲೆಯಲ್ಲಿ ವಿನಾಯಕ ಚತುರ್ಥಿ ಆಚರಣೆಕನ್ನಡಪ್ರಭ ವಾರ್ತೆ ಮೈಸೂರು
ನಗರದ ದಟ್ಟಗಳ್ಳಿಯಲ್ಲಿರುವ ವಿಶ್ವಪ್ರಜ್ಞ ಶಾಲೆಯಲ್ಲಿ ಗುರುವಾರ ವಿನಾಯಕ ಚತುರ್ಥಿಯ ಮಹಾಮಂಗಳಾರತಿ ಸಮಾರಂಭವನ್ನು ನೆರವೇರಿಸಲಾಯಿತು.ಈ ಕಾರ್ಯಕ್ರಮವು ಶಾಲೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಂ.ಎನ್. ಕೃಷ್ಣಸ್ವಾಮಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು. ವಿದ್ಯಾರ್ಥಿಗಳು ಹಾಡು, ಭಜನೆ, ನೃತ್ಯ, ನಾಟಕದ ಮೂಲಕ ವಿಘ್ನೇಶ್ವರನನ್ನು ಆರಾಧಿಸಿದರು. ವಿದ್ಯಾರ್ಥಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ.ಎನ್. ಮಹೇಂದ್ರ, ಶಾಲೆ ಮುಖ್ಯೋಪಾಧ್ಯಾಯಿನಿ ಜಿ.ಎನ್. ಸುಧಾ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.