ಕಳೆದ ಹಲವು ವರ್ಷಗಳಿಂದಲೂ ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇವೆ. ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಹೊಂದಿದ್ದೇವೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂಗಳೊಂದಿಗೆ ಮುಸ್ಲಿಮರು ಒಟ್ಟಾಗಿ ಹೆಜ್ಜೆ ಹಾಕಿ ಜಾತಿ-ಧರ್ಮದ ಭೇದವಿಲ್ಲದ ಸಹೋರತ್ವವನ್ನು ಪ್ರದರ್ಶಿಸಿದರು.ಪಟ್ಟಣದ 6ನೇ ವಾರ್ಡ್‌ನಲ್ಲಿ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಶನಿವಾರ ಸಂಜೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಪಟ್ಟಣದ ಅನಂತ್ ವೃತ್ತದ ಬಳಿ ಪೇಟೆ ಬೀದಿ ಹಾಗೂ 7ನೇ ವಾರ್ಡ್ ನ ಈದ್ಗಾ ಮೊಹಲ್ಲಾ ಬಳಿ ನೂರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಮರು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಹೂವಿನ ಹಾರ ಹಾಕಿ ಜೈಕಾರ ಹಾಕಿದ್ದರು. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯುವಕರಿಗೆ ಪಾನೀಯ ವಿತರಿಸಿದರು.
ಪುರಸಭೆ ಮಾಜಿ ಸದಸ್ಯ ನೂರುಲ್ಲಾ ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇವೆ. ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಹೊಂದಿದ್ದೇವೆ ಎಂದರು.ಮೆರವಣಿಗೆ ವೇಳೆ ಸಿಪಿಐ ಎಸ್.ಜಯಾನಂದ್ ನೇತೃತ್ವದಲ್ಲಿ ಬಿಗಿಭದ್ರತೆ ಕಲ್ಪಿಸಲಾಗಿತ್ತು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಜಾತ್ಯತೀತ ಮನೋಭಾವನೆಯೊಂದಿಗೆ ಹಿಂದೂ ಮುಸ್ಲಿಮರು ಒಟ್ಟಿಗೆ ಸೇರಿ ಮೆರವಣಿಗೆ ಮೂಲಕ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿದೆ ಎಂದರು.ಈ ವೇಳೆ ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು, ಮಾಜಿ ನಿರ್ದೇಶಕ ಪ್ರಕಾಶ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ಪುರಸಭೆ ನಾಮನಿರ್ದೇಶನ ಸದಸ್ಯ ಆನಂದ್, ಮುಸ್ಲಿಂ ಮುಖಂಡರಾದ ಅಬ್ದುಲ್ ಖಾಲಕ್, ಮುಕ್ರಂ ಪಾಷ, ದಸ್ತಗೀರ್ ಪಾಷ, ಜಮೀಲ್ ಪಾಷ, ಮುನೀರ್, ದೌಲತ್, ಶಾರುಖ್, ಅಕ್ರಂ ಯಾಸೀನ್ ಪಾಲ್ಗೊಂಡಿದ್ದರು.