ಸಾರಾಂಶ
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಮ್ನಲ್ಲಿ ಭಾನುವಾರ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ದೇಶದಲ್ಲಿ ನಡೆಯುತ್ತಿರುವ ಬಲಪಂಥೀಯ ರಾಜಕೀಯಕ್ಕೆ ಕಳೆದ 50 ವರ್ಷಗಳಿಂದ ಗೌರವ, ಹಕ್ಕುಗಳನ್ನು ಪಡೆದುಕೊಂಡ ಹಿಂದುಗಳೇ ನಿಜವಾದ ಬಲಿಪಶುಗಳಾಗುತಿದ್ದಾರೆ. ಬಲಪಂಥೀಯ ರಾಜಕೀಯದಿಂದ ಕೇವಲ ಮುಸ್ಲಿಮರಿಗೆ ಮಾತ್ರ ಅಪಾಯ ಅಲ್ಲ. ಶೇ.80ರಷ್ಟಿರುವ ಹಿಂದುಗಳಿಗೂ ಅಪಾಯ ಇದೆ ಎಂದು ಮಾಜಿ ಐಎಎಸ್ ಅಧಿಕಾರಿ ಹಾಗೂ ತಿರುವಳ್ಳೂರು ಸಂಸದ ಸಸಿಕಾಂತ್ ಸೆಂತಿಲ್ ಹೇಳಿದ್ದಾರೆ.ಅವರು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಮ್ನಲ್ಲಿ ಭಾನುವಾರ ಆಯೋಜಿಸಲಾದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನವ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಮುಸ್ಲಿಮರು ಈ ದೇಶಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಆ ಮೂಲಕ ಸಮುದಾಯ, ದೇಶವನ್ನು ಜೋಡಿಸುವ ಕಾರ್ಯವನ್ನು ಅವರು ಮಾಡಿದ್ದಾರೆ. ಆದರೆ ನಮ್ಮ ಸೌಹಾರ್ದ ಸಂಸ್ಕೃತಿಯ ಅರಿವು ಹಾಗೂ ಇತಿಹಾಸ ಗೊತ್ತಿಲ್ಲದ ಕೆಲವರು ಅದನ್ನು ತಿರುಚುತ್ತಿದ್ದಾರೆ. ಆದರೆ ನಮ್ಮ ಚರಿತ್ರೆ ಅತ್ಯಂತ ಬಲಿಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.ಸಮಾವೇಶವನ್ನು ಯೇನೆಪೋಯ ವಿವಿ ಕುಲಪತಿ ಅಬ್ದುಲ್ಲಾ ಕುಂಞ ಉದ್ಘಾಟಿಸಿದರು. ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಶರ್ಫುದ್ದೀನ್ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಮಾನವ ರತ್ನ ಪ್ರಶಸ್ತಿಯನ್ನು ಸಂಸದ ಸಸಿಕಾಂತ ಸೆಂಥಿಲ್, ಸೇವಾ ರತ್ನ ಪ್ರಶಸ್ತಿಯನ್ನು ಕಾರ್ಕಳದ ಉದ್ಯಮಿ ಕೆ.ಎಸ್.ನಿಸಾರ್ ಅಹ್ಮದ್ ಮತ್ತು ಸೌಹಾರ್ದ ರತ್ನ ಪ್ರಶಸ್ತಿ ಯನ್ನು ಉಡುಪಿಯ ಧರ್ಮಗುರು ಫಾ.ವಿಲಿಯಮ್ ಮಾರ್ಟಿಸ್ ಅವರಿಗೆ ಪ್ರದಾನ ಮಾಡಲಾಯಿತು.ವಿವಿಧ ಕ್ಷೇತ್ರಗಳ ಸಾಧಕರಾದ ಸಾಹಿತಿ ಡಾ.ಗಣನಾಥ ಎಕ್ಕಾರ್, ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷೆ ಸರಸು ಡಿ. ಬಂಗೇರ, ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸರಳಾ ಕಾಂಚನ್, ದಲಿತ ನಾಯಕ ಅಣ್ಣಪ್ಪ ನಕ್ರೆ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಮತ್ತು ಹಸೈನಾರ್ ಕೋಡಿ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ, ಒಕ್ಕೂಟ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಉದ್ಯಮಿ ಆಫ್ರೋಔ ಅಸ್ಸಾದಿ ದುಬೈ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಸದಸ್ಯ ರಮೇಶ್ ಕಾಂಚನ್, ಸಹ ಬಾಳ್ವೆಯ ಅಧ್ಯಕ್ಷ ಕೆ.ಫಣಿರಾಜ್, ದಸಂಸ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ತರ, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷ ಗ್ರೇಸಿ ಕೊಯಲೋ, ಕುಂದಾಪುರದ ಕೊಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೌಸ್ ಉಪಸ್ಥಿತರಿದ್ದರು.ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಯಾಸಿನ್ ಮಲ್ಪೆ ಆಶಯ ಭಾಷಣ ಮಾಡಿದರು. ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ ವಂದಿಸಿದರು. ಡಾ.ಜಮಾಲುದ್ದೀನ್ ಹಿಂದಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.