ಕನ್ನಡಪ್ರಭ ವಾರ್ತೆ ಕಲಾದಗಿ

ರಾಷ್ಟ್ರದ ಪುನರುತ್ಥಾನ ಜಾಗೃತಿಗಾಗಿ ಹಿಂದೂಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಸನಾತನ ಹಿಂದೂ ಧರ್ಮ ಸಾಗರದಂತೆ ವಿಶಾಲವಾಗಿದ್ದು ಒಬ್ಬರಿಂದ ಒಬ್ಬರಿಗೆ ಹರಡಿ ಸದಾ ಚಾಲನಶೀಲವಾಗಿದೆ ಎಂದು ಪ್ರಜ್ಞಾಪ್ರವಾಹ ಉತ್ತರಪ್ರಾಂತ ಪ್ರಚಾರ ಪ್ರಮುಖ ಕಿರಣಕುಮಾರ ವಿವೇಕವಂಶಿ ಹೇಳಿದರು.

ಕಲಾದಗಿಯಲ್ಲಿ ನಡೆದ ಬೃಹತ್‌ ವಿರಾಟ ಹಿಂದೂ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಹಿಂದೂತ್ವ ಎನ್ನುವುದು ಕೇವಲ ಧರ್ಮವಲ್ಲ ಅದೊಂದು ಸನಾತನಿಗಳು ಬದುಕುವ ಜೀವನ ಪದ್ಧತಿ ಎಂದು ಸಂವಿಧಾನದಲ್ಲಿಯೇ ಹೇಳಿದೆ. ವಸುದೈವ ಕುಟುಂಬಕಂ ಎನ್ನುವ ರೀತಿ ಹಿಂದೂತ್ವದಲ್ಲಿ ಎಲ್ಲರನ್ನೂ ಒಳಗೊಳ್ಳುವ ಗುಣವಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವದ ಹೊಸ್ತಿಲಲ್ಲಿ ಪಂಚ ಪರಿವರ್ತನೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶದಲ್ಲಿ ಸಂಘದ ಕಾರ್ಯಕರ್ತರು ಅವಿರತ ಕೆಲಸ ಮಾಡುತ್ತಿದ್ದು, ಸಂಘದ ಜೊತೆಗೂಡಿ ಧರ್ಮ ಕಾರ್ಯದಲ್ಲಿ ನಾವೆಲ್ಲರೂ ಸಕ್ರೀಯರಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜಗತ್ತಿಗೆ ಹಿಂದೂ ಧರ್ಮ ಅಭೇದ್ಯವಾದ ಕೋಟೆಯ ವೈಜ್ಞಾನಿಕ, ವೈಚಾರಿಕ ತಿರುಳಿನಂತೆ ಹಿಂದೂತ್ವ ಎನ್ನುವುದು ಗಂಗಾನದಿಯಷ್ಟೇ ಪವಿತ್ರವಾದದ್ದು. ಪೂಜ್ಯ ಪೇಜಾವರಶ್ರೀಗಳು ಅಸ್ಪೃಶ್ಯತೆ ಹೋಗಲಾಡಿಸಲು ಸಂಘದ ಜೊತೆಗೂಡಿ ಹಿಂದೂಗಳೆಲ್ಲರೂ ಒಂದು ಎಂದು ಸಾರಿ ಹೇಳಿದ್ದರು ಎಂದು ತಿಳಿಸಿದರು. ಅನವಾಲದ ಪೂಜ್ಯ ಕೈಲಾಸಪತಿ ಸ್ವಾಮಿಜಿಗಳು, ಮಹಿಳಾ ಪ್ರತಿನಿಧಿ ಸಂಗೀತಾ ಬಶೆಟ್ಟೆಪ್ಪ ಅಂಗಡಿ ಮಾತನಾಡಿದರು. ಬಿ.ಕೆ.ಬುದ್ನಿಯ ಶಂಕರಾಚಾರ್ಯ ಸ್ವಾಮೀಜಿಗಳು, ಹಿಂದೂ ಸಮ್ಮೇಳನ ಸಮಿತಿ ಹೋಬಳಿ ಅಧ್ಯಕ್ಷ ಲಕ್ಷ್ಮಣ ಶಿರಬೂರ, ಉಪಾಧ್ಯಕ್ಷ ದಯಾನಂದ ವಾಘ ಇದ್ದರು.ಸಂಘ ಯಾವತ್ತು ಜಾತಿ ಕೇಂದ್ರಿತವಾಗಿ ಸಂಘಟಣೆ ಮಾಡಲಿಲ್ಲ. ನ ಹಿಂದೂ ಪತಿತೋ ಭವೇತ ಹಿಂದವ ಸೋದರ ಸರ್ವೆ ಎನ್ನುವ ರೀತಿ ಎಲ್ಲರೂ ನಮ್ಮ ಸಹೋದರರು ನಾವೆಲ್ಲರೂ ಒಂದು ಯಾವ ಹಿಂದೂವು ಪತಿತನಲ್ಲ ಎನ್ನುವ ರೀತಿ ಸಂಘ ಮಾಡಿ ತೋರಿಸಿದೆ.

-ಕಿರಣಕುಮಾರ ವಿವೇಕವಂಶಿ, ಪ್ರಜ್ಞಾಪ್ರವಾಹ ಉತ್ತರಪ್ರಾಂತ ಪ್ರಚಾರ ಪ್ರಮುಖರು.