ಕನ್ನಡಪ್ರಭ ವಾರ್ತೆ ಮದ್ದೂರು

ಹಿಂದೂ ಎನ್ನುವುದು ಒಂದು ಸಮುದಾಯ, ಜಾತಿಯ ಹೆಸರಲ್ಲ. ಯಾರು ಹೀನತೆಯನ್ನು ದೂಷಣೆ ಮಾಡುವರೋ, ಕೆಟ್ಟದ್ದನ್ನು, ದುಷ್ಟತೆಯನ್ನು ವಿರೋಧಿಸುವರೋ ಅವರೆಲ್ಲರೂ ಹಿಂದೂಗಳು ಎಂಬುದಾಗಿ ಸಂಸ್ಕೃತ ಸಾಹಿತ್ಯದಲ್ಲೇ ಹೇಳಿದೆ ಎಂದು ಬಿಜೆಪಿ ಮಾಜಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಹಿಂದೂಪರ ಸಂಘಟನೆಗಳಿಂದ ಆಯೋಜಿಸಿದ್ದ ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವರಿಗೆ ಹಿಂದೂ ಎಂದರೆ ಕವಿಗೆ ಕಾದ ಸೀಸ ಹೊಯ್ದಂಗೆ ಆಗುತ್ತದೆ. ಅವರೆಲ್ಲರೂ ಜಾತ್ಯತೀತರು ಎನ್ನುತ್ತಾರೆ. ನನ್ನ ಪ್ರಕಾರ ಅಪ್ಪ- ಅಮ್ಮ ಇಲ್ಲದವರು ಮಾತ್ರ ಜಾತ್ಯತೀತರು. ಜಾತ್ಯತೀತರು ಎಂದೇಳಿಕೊಳ್ಳುವ ಬುದ್ಧಿ ಜೀವಿಗಳೇ, ದುರ್ಬುದ್ಧಿ ಜೀವಿಗಳೇ ಮೊದಲು ನಿಮ್ಮ ಎದೆ ಮುಟ್ಟಿ ನೋಡಿಕೊಳ್ಳಿ. ನಿಮಗೂ ಅಪ್ಪ- ಅಮ್ಮ ಇದ್ದಾರಲ್ಲವೇ. ನಿಮಗೆ ಅಪ್ಪ- ಅಮ್ಮ ಇಲ್ಲದಿದ್ದರೆ ಜಾತ್ಯತೀತರೆಂದು ಹೇಳಿಕೊಳ್ಳಿ. ಆದರೆ, ನಾನಂತೂ ಜಾತ್ಯತೀತ ಅಲ್ಲ ಎಂದು ನೇರವಾಗಿ ನುಡಿದರು.

ರಕ್ತದ ಗುಂಪೇ ಗೊತ್ತಿಲ್ಲದ ಸಮುದಾಯ ನಮ್ಮನ್ನು ಆಳಲು ಆರಂಭಿಸಿದೆ. ಅವರು ರಕ್ತದ ಗುಂಪೇ ಗೊತ್ತಿಲ್ಲದ ನಪುಂಸಕರು. ಅದಕ್ಕೆ ಇತಿಹಾಸವನ್ನು ಓದಬೇಕು. ಹಿಂದೂಗಳೆಂದರೆ ಕುರಿಮಂದೆಯೊಂದಿಗೆ ಬದುಕುತ್ತಿರುವ ಕುರಿಗಳಲ್ಲ. ಹಿಂದೂಗಳು ಸಿಂಹದ ಮರಿಗಳು. ನಮ್ಮದು ಗುಲಾಮಿ ಬದುಕಾಗಿರಲಿಲ್ಲ. ಗೆಲುವಿನ ಬದುಕಾಗಿತ್ತು ಎಂದು ಗಟ್ಟಿ ದನಿಯಲ್ಲಿ ಹೇಳಿದರು.

ಸಮಾಜದಲ್ಲಿ ಬದಲಾವಣೆಯಾಗಬೇಕು. ಸಮಾಜ ಒಟ್ಟಾಗಬೇಕು. ಎದ್ದು ನಿಲ್ಲಬೇಕು. ಜಾತಿಯ ಮುಖವಾಡದ ಬದುಕಿನಿಂದ ಹೊರಬರಬೇಕು. ಜಾತಿ ಸಂಪ್ರದಾಯದಿಂದ ಬಂದಿದ್ದಲ್ಲ. ಇದೊಂದು ವಿಕಾರ, ವಿಕೃತಿ. ಯಾವುದೇ ಧರ್ಮಶಾಸ, ಸಂಸ್ಕೃತಿ, ಇತಿಹಾಸದ ಪುಟಗಳಲ್ಲೂ ಜಾತಿಯ ಉಲ್ಲೇಖವಾಗಿಲ್ಲ ಎಂದು ತಿಳಿಸಿದರು.


ಜಾತಿಯ ವಿಷಬೀಜವನ್ನು ಮೊಟ್ಟಮೊದಲಿಗೆ ಹುಟ್ಟುಹಾಕಿದವರು ಬ್ರಿಟಿಷರು. ಹೀಗೆ ಹೇಳಿದರೆ ಜನರು ನಂಬುವುದಿಲ್ಲ. ಏಕೆಂದರೆ, ಜನರಿಗೆ ವಿಕೃತಿಗಳು, ವಿಕಾರಗಳೇ ಬೇಕು. ಆದರೆ, ಅದು ಬದುಕಲ್ಲ. ಬದುಕಿನ ರೀತಿ, ನೀತಿ, ಸಿದ್ಧಾಂತವೇ ಬೇರೆ. ಅದು ಅರ್ಥವಾಗದಿದ್ದರೆ ವಿಕಾರ, ವಿಕೃತಿಗಳನ್ನೇ ಬದುಕೆಂದು ತಿಳಿದು ಜೀವಿಸಬೇಕಾಗುತ್ತದೆ ಎಂದು ಕಠಿಣವಾಗಿ ಹೇಳಿದರು.

ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಸ್ಮರಣೆ ಮಾಡಲು ಸೇರಿದ್ದೇವೆ. ಬಿಸಿ ರಕ್ತ ಸುರಿಸಿದ ಸಹಸ್ರಾರು ಯೋಧರ ಬಲಿದಾನದ ಪ್ರತಿಫಲವೇ ಇಂದು ಸ್ವತಂತ್ರ ಸಿಕ್ಕಿದೆ. ಆದರೆ, ಪುಸ್ತಕದಲ್ಲಿ ಗುಲಾಮಗಿರಿ ಎಂದು ಬರೆಯಲಾಗಿದೆ. ಆದರೆ, ನಮ್ಮದು ಗುಲಾಮಿ ರಕ್ತ ಅಲ್ಲ, ಹೋರಾಟದ ರಕ್ತ. ನಾವು ಮಹಮದ್ ಘೋರಿ, ಮೊಹಮದ್ ಗಜ್ನಿವರೆಗೂ ಹೋರಾಟ ಮಾಡಿದ್ದೇವೆ. ಎಲ್ಲಿಯೂ ತಲೆ ತಗ್ಗಿಸಿ ಯಾರನ್ನೂ ಒಪ್ಪಿಕೊಂಡಿಲ್ಲ ಎಂದರು.

ಎಲ್ಲೆಲ್ಲಿ ಮುಸಲ್ಮಾನ ಹೆಜ್ಜೆ ಇಟ್ಟಿದ್ದಾರೋ ಅಲ್ಲೆಲ್ಲ ನವಾಬಗಿರಿ ಮಾಡಿದ್ದಾರೆ. ಆದರೆ, ಮೈಸೂರಿನಲ್ಲಿ ಮಾಡಲು ಬಿಟ್ಟಿಲ್ಲ. ಅದಕ್ಕೆ ಕಾರಣ ಇಲ್ಲಿನ ವೀರಮಣ್ಣು. ಇಲ್ಲಿ ಟಿಪ್ಪುವಿನ ಜೊತೆ ಅವನ ಸಮಾಧಿಯನ್ನೂ ಮಾಡಿ ಮುಗಿಸಿದರು. ಅದರ ಹೆಮ್ಮೆ ಮೈಸೂರಿನ ವೀರ ಮಕ್ಕಳಿಗೆ ಸಲ್ಲಬೇಕು ಎಂದು ಹೇಳಿದರು.

ಸೋಗಲಾಡಿ ಇತಿಹಾಸಕಾರರು ಮೂಲ ಇತಿಹಾಸವನ್ನು ಬಿಸಿ ರಕ್ತ ತಣ್ಣಗಾಗುವಂತೆ ಮಾಡಿದ್ದಾರೆ. ನಮ್ಮದು ಹೋರಾಟದ ಇತಿಹಾಸ. ಎಷ್ಟು ರಕ್ತ ಈ ನೆಲದಲ್ಲಿ ಹರಿದಿದೆ. ದೇಶಕ್ಕೆ ಬಲಿಯಾದವರ ಇತಿಹಾಸ ನೋಡಿದರೆ ಕಣ್ಣಲ್ಲಿ ನೀರು ಬರಲ್ಲ ರಕ್ತ ಬರುತ್ತದೆ. ನಮ್ಮಲ್ಲಿ ಹರಿಯುತ್ತಿರುವ ರಕ್ತ ಗುಲಾಮಿ ರಕ್ತವಲ್ಲ. ವೀರ ರಕ್ತ ಎಂದು ನೆನಪಿಸುವವರು, ಇಂದು ಹಿಂದೂ ಸಮಾಜವನ್ನು ಎಚ್ಚರಿಸುವವರು ಬೇಕಾಗಿದ್ದಾರೆ ಎಂದರು.