ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂ ನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅದ್ವಿತೀಯ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದದರು.ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂ ನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮಸಾಲಾ ಜಯರಾಮ್ ಮತ್ತು ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ರವರ ನೇತೃತ್ವದಲ್ಲಿ ಮಸಾಲಾ ಜಯರಾಮ್ ರವರ ಫಾರಂ ಹೌಸ್ ನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಮಸಾಲಾ ಜಯರಾಮ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮತ್ತು ಅಮಿತ್ ಷಾ ರವರ ಚಾಣಕ್ಯ ತಂತ್ರ ಎಲ್ಲೆಡೆ ಕಾರ್ಯ ಸಾಧಿಸಿದೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬಾವುಟ ಅರಳಿರಲಿಲ್ಲ. ಅಂದಿನಿಂದ ಒಂದೊಂದು ಹೆಜ್ಜೆ ಹಾಕಿ ಮುನ್ನೆಡೆದ ಬಿಜೆಪಿ ಇಂದು ರಾಜ್ಯವನ್ನು ಆಳುವ ಹಂತ ತಲುಪಿದೆ. ಕಾಂಗ್ರೆಸ್ ಗೆ ಭವಿಷ್ಯವಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. ಬಂಗಾಳದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ. ಬಾಂಗ್ಲಾದವರಿಂದ ಹಿಂದೂಗಳ ರಕ್ಷಣೆ ಆಗಲಿದೆ ಎಂಬ ಆಶಾಭಾವನೆಯನ್ನು ಮಸಾಲಾ ಜಯರಾಮ್ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿಯ ಹಿರಿಯ ಮುಖಂಡರಾದ ಅರಳೀಕೆರೆ ಶಿವಯ್ಯ, ಕೊಂಡಜ್ಜಿ ವಿಶ್ವನಾಥ್, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಮಹಿಳಾ ಮುಖಂಡರಾದ ಅನಿತಾ ನಂಜುಂಡಸ್ವಾಮಿ, ಆಶಾರಾಜಶೇಖರ್, ರಾಧಾ,ಶೋಭಾ, ಸಾವಿತ್ರಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.
----------------------------------------------ಉಪ ಚುನಾವಣೆ: ಕಾಂಗ್ರೆಸ್ ನಿಂದಲೂ ವಿಜಯೋತ್ಸವ
ದಾವಣಗೆರೆ ಮತ್ತು ಬಾಗಲಕೋಟೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಲ್ಲಿಯ ಮಿನಿ ವಿಧಾನ ಸೌಧದ ಮುಂಭಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ದೇವರಾಜು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ರವರಿಗೆ ಜಯಕಾರ ಹಾಕಿದರು. ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ದೇವರಾಜು, ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಿ ಬಡಜನರ ಪಾಲಿಗೆ ಕಲ್ಪವೃಕ್ಷವಾಗಿದೆ. ಅಲ್ಲದೇ ಅಭಿವೃದ್ಧಿ ಕಾರ್ಯಗಳನ್ನೂ ಸಹ ಮಾಡುತ್ತಿದೆ ಎನ್ನುವುದಕ್ಕೆ ಬಾಗಲಕೋಟೆ ಮತ್ತು ದಾವಣಗೆರೆಯ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಕೊಂಡಜ್ಜಿ ಕುಮಾರ್, ಮುಖಂಡರಾದ ನಂಜುಂಡಪ್ಪ, ಪ್ರಕಾಶ್, ನಂಜೇಗೌಡ, ಚಿಕ್ಕೇಗೌಡ, ರೇವಣ್ಣ, ಚಂದ್ರು, ಜಾಫರ್, ನಾಗಲಾಪುರ ಜಗದೀಶ್, ಎಸ್ ಸಿ, ಎಸ್ಟಿ ಘಟಕದ ಮುಖಂಡ ಜೋಗಿ ಶಿವರಾಜು, ಮುನಿಯೂರು ಗಿರೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.