ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಹಿಂದೂ ಜಾಗರಣ ವೇದಿಕೆ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಷಣಕಾರರಾಗಿ ಆಗಮಿಸಲಿದ್ದ ದಾವಣಗೆರೆಯ ಹಿಂದು ಮುಖಂಡ ಸತೀಶ್ ಪೂಜಾರಿ ಜಿಲ್ಲೆಯನ್ನು ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧಿಸಿದೆ.ರೌಡಿ ಶೀಟರ್ ಆಗಿರುವ ಸತೀಶ್ ಪೂಜಾರಿ ಅವರ ಕೋಮುಪ್ರಚೋದಕ ಭಾಷಣದಿಂದ ಸಮಾಜದ ಸ್ವಾಸ್ತ್ಯ ಕದಡುವ ಸಾಧ್ಯತೆ ಇದೆ. ಅಲ್ಲದೆ ಕಾರ್ಕಳ, ಕುಂದಾಪುರ ತಾಲೂಕುಗಳಲ್ಲಿಯೂ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಅಲ್ಲಿಯೂ ಸತೀಶ ಪೂಜಾರಿಯನ್ನು ಕರೆಸಿ ಕೋಮು ಪ್ರಚೋಚಕ ಭಾಷಣ ಮಾಡಿಸಿ ಗಲಭೆ ಎಬ್ಬಿಸುವ ಹುನ್ನಾರ ಮಾಡಿರುವುದು ತಿಳಿದು ಬಂದಿದೆ. ಆದ್ದರಿಂದ ಅವರು ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸತೀಶ್ ಪೂಜಾರಿ ಉಡುಪಿ ಜಿಲ್ಲೆಯನ್ನು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.ಉಡುಪಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದಂತೆ ಸೂಕ್ತ ಮುಂಜಾಗೃತಾ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಿರುವುದಾಗಿ ಡಿಸಿ ತಿಳಿಸಿದ್ದಾರೆ.