ಹಿಪ್ಪರಗಿ ಬ್ಯಾರೇಜ್‌ಗೆ ಕರಾಳ ದಿನಗಳು ಒಕ್ಕರಿಸಿದ್ದು, ಐದು ದಿನ ಸಾಕಷ್ಟು ಪ್ರಮಾಣದ ನೀರು ಬ್ಯಾರೇಜ್‌ನಿಂದ ಖಾಲಿಯಾಗಿರುವುದು ನಾಗರಿಕರು, ರೈತರಿಗೆ ಜೀರ್ಣಿಸಿಕೊಳ್ಳಲಾಗದ ವಿಷಯವಾಗಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹಿಪ್ಪರಗಿ ಬ್ಯಾರೇಜ್‌ಗೆ ಕರಾಳ ದಿನಗಳು ಒಕ್ಕರಿಸಿದ್ದು, ಐದು ದಿನ ಸಾಕಷ್ಟು ಪ್ರಮಾಣದ ನೀರು ಬ್ಯಾರೇಜ್‌ನಿಂದ ಖಾಲಿಯಾಗಿರುವುದು ನಾಗರಿಕರು, ರೈತರಿಗೆ ಜೀರ್ಣಿಸಿಕೊಳ್ಳಲಾಗದ ವಿಷಯವಾಗಿದೆ. ರಾಜ್ಯ ಸರ್ಕಾರದ ಬೇಜವಾಬ್ದಾರಿ ಮತ್ತು ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಬೆಳೆಗೆ ನೀರುಣಿಸುವುದು ಹೇಗೆಂದು ಹಿನ್ನೀರಿನ ಜನತೆ ಹಾಗೂ ರೈತರು ಕಂಗಾಲಾಗಿದ್ದಾರೆ. ಗೇಟ್‌ ದುರಸ್ತಿ ಕಾರ್ಯ ಸಮರ್ಪಕವಾಗಿಲ್ಲ. ತೇಪೆ ಕಾಮಗಾರಿಯಿಂದ ನಿತ್ಯ ೪೦೦ ಕ್ಯುಸೆಕ್ ನೀರು ಸೋರಿಕೆಯಾಗುತ್ತಿದೆ. ಇದರಿಂದ ಮತ್ತಷ್ಟು ನೀರು ಖಾಲಿಯಾಗುವ ಸಾಧ್ಯತೆಯಿದೆ. 6 ಟಿಎಂಸಿ ನೀರಲ್ಲಿ 3 ಟಿಎಂಸಿ ನೀರು ಖಾಲಿಯಾಗಿದೆ. ಉಳಿದ ಗೇಟ್‌ಗಳು ಕೂಡ ದುರ್ಬಲವಾಗಿದ್ದು, ಅವು ಸಹ ಯಾವಾಗ ಕೈಕೊಡುತ್ತವೆ ಎಂಬ ಆತಂಕವೂ ಇದೆ.

ಮಹಾ ನೀರು ಬಂದೀತೆ?: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಕುಡಚಿ, ರಾಯಬಾಗ, ಅಥಣಿ, ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ ನಗರ ಹಾಗೂ ನೂರಾರು ಗ್ರಾಮಗಳಿಗೆ ಜೀವಜಲವಾಗಿರುವ ಕೃಷ್ಣೆಯ ಒಡಲು ಸಂಪೂರ್ಣ ಬತ್ತಿರುವುದರಿಂದ ಹನಿ ನೀರಿಗೂ ತತ್ವಾರ ಪಡುವಂತಾಗಲಿದೆ. ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಎಲ್ಲ ಶಾಸಕ, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರನ್ನೊಳಗೊಂಡು ಮಹಾರಾಷ್ಟ್ರದಿಂದ ತಕ್ಷಣವೇ ಕನಿಷ್ಠ ೨ ಟಿಎಂಸಿ ನೀರನ್ನು ಬಿಡುಗಡೆಗೆ ಮನವೊಲಿಸಿದರೆ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿದೆ. ನೀರಿಗೆ ಹಾಹಾಕಾರ ಉಂಟಾಗುವ ಮುಂಚೆಯೇ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂಬುದು ಜನತೆಯ ಒಕ್ಕೊರಲಿನ ಆಗ್ರಹವಾಗಿದೆ.

ಗೇಟ್‌ ಬದಲಿಸಲು ಸರ್ಕಾರದಿಂದ ಹಸಿರು ನಿಶಾನೆ?: ತುಂಗಭದ್ರ ಜಲಾಶಯಕ್ಕೆ ಹೊಸ ಗೇಟ್‌ ಅಳವಡಿಸುವ ಯೋಜನೆ ಸರ್ಕಾರ ಮಾಡುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನ ಎಲ್ಲ ೨೨ ಗೇಟ್‌ಗಳನ್ನೂ ಹೊಸದಾಗಿ ಅಳವಡಿಸುವ ಕಾರ್ಯ ಮಾಡಬೇಕೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹಾಗೂ ಸಿದ್ದು ಕೊಣ್ಣೂರ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್‌ ಗಮನಕ್ಕೆ ತಂದಿದ್ದು, ಅವರಿಂದ ಹಸಿರು ನಿಶಾನೆ ದೊರೆತಿದೆ ಎನ್ನಲಾಗುತ್ತಿದೆ. ಊರು ಕೊಳ್ಳೆ ಹೊಡೆದ ಮೇಲೆ ದಡ್ಡಿ ಬಾಗಿಲು ಹಾಕಿದರು ಎಂಬಂತಾಗಿದೆ ರಾಜ್ಯ ಸರ್ಕಾರದ ನಡೆ.ಶನಿವಾರ ಬಹುತೇಕ ಕಾರ್ಯ ಪೂರ್ಣಗೊಳ್ಳುವ ಭರವಸೆಯಿದ್ದರೂ ಜಲಾಶಯದಿಂದ ನೀರಿನ ಹೊರಹರಿವಿನ ಪ್ರಮಾಣ ಸಂಪೂರ್ಣ ನಿಲ್ಲಿಸಲು ಎಲ್ಲಾ ೨೨ ಗೇಟ್‌ಗಳನ್ನು ತೆಗೆದು ನೂತನ ಗೇಟ್‌ ಅಳವಡಿಸುವುದೊಂದೇ ಪರಿಹಾರ ಎಂಬ ಮಾತುಗಳು ಕೇಳಿಬರುತ್ತಿವೆ.

ಅಧೀಕ್ಷಕರ ಭೆಟ್ಟಿ: ಕನೀನಿ ಅಧಿಕಾರಿಗಳು ಜಲಾಶಯಕ್ಕೆ ಭೇಟಿ ನೀಡದೇ ದಿವ್ಯ ನಿರ್ಲಕ್ಷ್ಯ ತೋರಿದ್ದರು. ಆದರೆ ಶುಕ್ರವಾರ ಸಂಜೆ ಕನಿನಿ ಇಲಾಖೆ ಅಥಣಿ ವಿಭಾಗದ ಅಧೀಕ್ಷಕ ಅಭಿಯಂತರ ಬಿ.ಎ. ನಾಗರಾಜ ಸ್ಥಳಕ್ಕೆ ಭೆಟ್ಟಿ ನೀಡಿ ದುರಸ್ತಿ ಕಾರ್ಯದ ಬಗ್ಗೆ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುವ ಮೂಲಕ ಶನಿವಾರ ಪೂರ್ಣ ಪ್ರಮಾಣದ ಕಾರ್ಯ ಮುಕ್ತಾಯಗೊಳಿಸುವುದೆಂದು ತಿಳಿಸಿದ್ದಾರೆ. ರೈತರೊಡನೆ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಜಲಾಶಯಕ್ಕೆ ಭೇಟಿ ನೀಡಿ ಬ್ಯಾರೇಜ್‌ನ ಗೇಟ್ ನಂ.೨೨ ಹಾಗೂ ನೀರಿನ ಪ್ರಮಾಣ ವೀಕ್ಷಣೆ ಮಾಡಿದರು.ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರದ ಮಲತಾಯಿ ಧೋರಣೆಯಿಂದ ಈ ಅವಘಡ ಸಂಭವಿಸಿದೆ. ೧೫ ವರ್ಷಕ್ಕೊಮ್ಮೆ ಬದಲಿಸಬೇಕಾದ ಬ್ಯಾರೇಜ್‌ ಗೇಟ್‌ಗಳ ಪ್ಲೇಟ್‌ಗಳು ೨೧ ವರ್ಷವಾದರೂ ಅವುಗಳನ್ನೇ ಬಳಕೆ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಜಲಾಶಯ ಹಾಗೂ ಬ್ಯಾರೇಜ್‌ಗಳೆಂದರೆ ಸರ್ಕಾರಕ್ಕೆ ನಿರ್ಲಕ್ಷ್ಯವೆಂಬುವುದಕ್ಕೆ ಇದೇ ನಿದರ್ಶನ.

- ಹಣಮಂತ ನಿರಾಣಿ ವಿಧಾನ ಪರಿಷತ್‌ ಸದಸ್ಯರು

ಕೋಟ್‌ಈಗಲೇ ಈ ಸ್ಥಿತಿಯಾದರೆ ಬೇಸಿಗೆಯಲ್ಲಿ ಹೇಗೆ?. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಈಗಲೇ ಕೃಷ್ಣಾ ನದಿಯಲ್ಲಿ ಸುಮಾರು 8 ಅಡಿ ನೀರು ಕಡಿಮೆಯಾಗಿದ್ದು, ಬೇಸಿಗೆ ಪ್ರಾರಂಭಕ್ಕಿಂತ ಮುಂಚೆಯೇ ಹೀಗಾದರೆ ಮಾರ್ಚ್‌ನಲ್ಲಿ ಕೃಷ್ಣೆ ಬರಿದಾಗುವ ಸಾಧ್ಯತೆ ಇದೆ. ಹೀಗಾಗಿ, ಮಹಾರಾಷ್ಟ್ರ ಸರ್ಕಾರ ರೈತರ ಹಿತ ಕಾಪಾಡುವ ಜೊತೆಗೆ ಕರ್ನಾಟಕದ ಗ್ರಾಮಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕು.

- ಅರುಣಕುಮಾರ ಯಲಗುದ್ರಿ, ನೀರಾವರಿ ಇಲಾಖೆ ನಿವೃತ್ತ ಎಂಜಿನಿಯರ್‌

ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನ ಪೆನಲ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದರೂ ನೀರಿನ ಹೊರಸೋರಿಕೆ ಮುಂದುವರೆದಿದ್ದು, ೭ ಟನ್‌ನಷ್ಟು ಭಾರವಿರುವ ಪೆನಲ್‌ಗಳ ಅಳವಡಿಕೆ ಕಾರ್ಯಕ್ಕೆ ನೀರಿನ ಒತ್ತಡದಿಂದ ವಿಳಂಬವಾಗಿದೆ. ಗೇಟ್ ಒಳಗಡೆಯ ಸೋರಿಕೆಗೆ ಶಿವಮೊಗ್ಗದಿಂದ ಪರಿಣಿತ ಮುಳುಗು ತಜ್ಞರು ಶನಿವಾರ ಸಂಜೆ ಹಿಪ್ಪರಗಿಗೆ ಆಗಮಿಸಿದ್ದಾರೆ. ನೀರಿನ ಒಳ ಚಿತ್ರಣ ಸಮಸ್ಯೆ ಕಾರಣ ಭಾನುವಾರ ಬೆಳಗ್ಗೆಯಿಂದ ಕಾರ್ಯ ಶುರು ಮಾಡಲಿದ್ದು, ಭಾನುವಾರ ಸಂಜೆಯೊಳಗೆ ಕಾರ್ಯ ಪೂರ್ಣಗೊಳ್ಳಲಿದೆ.

-ರಾಜಶೇಖರ ಅಮೀನಭಾವಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ, ಬೆಂಗಳೂರು