ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯನ್ನು ಗುತ್ತಿಗೆ (ಲೀಸ್) ಆಧಾರದ ಮೇಲೆ ನೀಡಲು ಆಡಳಿತ ಮಂಡಳಿಗೆ ಅಧಿಕಾರ ನೀಡಲಾಯಿತು.ಕಾರ್ಖಾನೆ ಆವರಣದಲ್ಲಿ ಸೋಮವಾರ ನಡೆದ 68ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರ್ಖಾನೆಯನ್ನು ಲೀಸ್ ಮೇಲೆ ನೀಡಲು ಸರ್ವ ಸದಸ್ಯರು ಆಡಳಿತ ಮಂಡಳಿಯ ನಿರ್ಣಯಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಯಿಂದ ಕಾರ್ಖಾನೆಗೆ ₹590 ಕೋಟಿ ಸಾಲದ ಹೊರೆಯಾಗಿದೆ. ಈ ಸಾಲದಿಂದ ಪ್ರತಿವರ್ಷ ₹65 ರಿಂದ ₹70 ಕೋಟಿ ಬಡ್ಡಿ ಪಾವತಿಸಬೇಕಿದೆ. ಸಾಲದ ಹೊರೆಯಿಂದ ಹೊರಬರಲು ಲೀಸ್ ಗೆ ನೀಡಲು ಆಡಳಿತ ಮಂಡಳಿ ಮುಂದಾಗಿದೆ. ಇದರಿಂದ ಸದಸ್ಯರ ಹಕ್ಕುಗಳಿಗೆ ಧಕ್ಕೆಯಾಗದು. ಸಹಕಾರ ರಂಗದಲ್ಲಿಯೇ ಕಾರ್ಖಾನೆ ಮುಂದುವರಿದು ಆಡಳಿತ ಮಂಡಳಿಗೆ ಪಂಚವಾರ್ಷಿಕ ಚುನಾವಣೆ ನಡೆಯಲಿದೆ ಎಂದು ಹೇಳಿದರು.ಪ್ರತಿ ಹಂಗಾಮಿನಲ್ಲಿ ಕನಿಷ್ಠ 11 ಲಕ್ಷ ಮೆ.ಟನ್ ಕಬ್ಬು ನುರಿಸುವ ಅಗತ್ಯವಿದೆ. ಶೇ.11.5 ರಷ್ಟು ರಿಕವರಿ, ಇನ್ನುಳಿದ ಕೋಜನರೇಶನ್, ಎಥೆನಾಲ್ ಘಟಕದ ಆದಾಯ ಹೆಚ್ಚಾದರೆ ಮಾತ್ರ ಕಾರ್ಖಾನೆ ಆರ್ಥಿಕವಾಗಿ ಸಬಲವಾಗಲು ಸಾಧ್ಯ. ಕಾರ್ಖಾನೆ ಆರಂಭವಾದ 29 ವರ್ಷಗಳಲ್ಲಿ 19 ವರ್ಷ ಹಾನಿ ಅನುಭವಿಸಿದರೂ ಕಬ್ಬಿಗೆ ಎಫ್‌ಆರ್‌ಪಿಗಿಂತ ಹೆಚ್ಚಿನ ದರ ನೀಡಲಾಗಿದೆ. ಆದ್ದರಿಂದ ಸದಸ್ಯರು ಮತ್ತು ಕಬ್ಬು ಬೆಳೆಗಾರರು ಬೇರೆಡೆ ಕಬ್ಬು ಕಳುಹಿಸುವುದನ್ನು ನಿಲ್ಲಿಸಿ ನಿಮ್ಮ ಕಾರ್ಖಾನೆಗೆ ಕಳಿಸಬೇಕು ಎಂದು ಮನವಿ ಮಾಡಿದರು.
ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದವರಿಗೆ ಬಿಲ್ ಪಾವತಿ ವಿಳಂಬವಾದ್ದರಿಂದ ಕತ್ತಿ ಕುಟುಂಬದ ಆಸ್ತಿ ಅಡವಿಟ್ಟು ₹112 ಕೋಟಿ ಸಾಲ ಪಡೆದು ಕಬ್ಬು ಪೂರೈಕೆದಾರರು, ತೋಡ್ನಿ-ಓಡ್ನಿ, ಕಮೀಶನ್ ಬಿಲ್ ಪಾವತಿಸಲಾಗಿದೆ. ದಿ.ಅಪ್ಪಣ್ಣಗೌಡ ಪಾಟೀಲ, ಎಸ್.ಐ.ಪಾಟೀಲ, ಎಂ.ಪಿ. ಪಾಟೀಲ, ವಿಶ್ವನಾಥ ಕತ್ತಿ, ಬಸಗೌಡ ಪಾಟೀಲ ಮೊದಲಾದ ಸಹಕಾರಿ ಮುಖಂಡರ ನಿಸ್ವಾರ್ಥ ಶ್ರಮದಿಂದ ನಿರ್ಮಾಣವಾದ ಕಾರ್ಖಾನೆಗೆ ಒಳ್ಳೆಯ ದಿನಗಳನ್ನು ತರಲು ಶ್ರಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದವರು ಹೇಳಿದರು.ಕಾರ್ಖಾನೆ ಅಧ್ಯಕ್ಷರೂ ಆದ ಶಾಸಕ ನಿಖಿಲ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಶಶಿಕಾಂತ ನಾಯಿಕ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ನಿರ್ದೇಶಕರಾದ ಶಿವನಾಯಿಕ ನಾಯಿಕ, ಶಿವಪುತ್ರಪ್ಪ ಶಿರಕೋಳಿ, ಪ್ರಭುದೇವ ಪಾಟೀಲ, ಸುರೇಶ ಬೆಲ್ಲದ, ಬಸವರಾಜ ಕಲ್ಲಟ್ಟಿ, ಬಸವರಾಜ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಮುಖಂಡರಾದ ಪೃಥ್ವಿ ಕತ್ತಿ, ಕಲಗೌಡ ಪಾಟೀಲ, ವಿಜಯ ಶೆರೇಕರ, ಕುನಾಲ ಪಾಟೀಲ, ಮಹಾವೀರ ನಿಲಜಗಿ, ಸತ್ಯಪ್ಪ ನಾಯಿಕ, ಶ್ರೀಕಾಂತ ಹತನೂರೆ, ಅಮರ ನಲವಡೆ, ಗುರು ಕುಲಕರ್ಣಿ, ಜಯಸಿಂಗ ಸನದಿ, ಸುನೀಲ ಪರ್ವತರಾವ, ಸಂಜು ಶಿರಕೋಳಿ, ಶಶಿರಾಜ ಪಾಟೀಲ ಇತರರು ಉಪಸ್ಥಿತರಿದ್ದರು.
ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಕರ್ಕಿನಾಯಿಕ ವಿಷಯ ಮಂಡಿಸಿದರು. ನಿರ್ದೇಶಕರಾದ ಅಶೋಕ ಪಟ್ಟಣಶೆಟ್ಟಿ ಸ್ವಾಗತಿಸಿದರು. ಕಚೇರಿ ಅಧೀಕ್ಷಕ ಸುಭಾಷ ನಾಶಿಪುಡಿ ನಿರೂಪಿಸಿದರು. ನಿರ್ದೇಶಕ ಬಾಬಾಸಾಹೇಬ ಅರಬೋಳೆ ವಂದಿಸಿದರು.