ಸಾರಾಂಶ
ಹಿರಣ್ಯಕೇಶಿ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಸಂಕೇಶ್ವರ ಪಟ್ಟಣಕ್ಕೆ ನೀರು ನುಗ್ಗಿದ್ದು, ಎರಡು ದೇವಸ್ಥಾನಗಳಿಗೆ ಸುತ್ತ ನೀರು ಆವರಿಸಿದೆ.
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಜಿಲ್ಲೆ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಿರಣ್ಯಕೇಶಿ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಪಟ್ಟಣಣಕ್ಕೆ ನೀರು ನುಗ್ಗಿದ್ದು, ಎರಡು ದೇವಸ್ಥಾನಗಳಿಗೆ ಸುತ್ತ ನೀರು ಆವರಿಸಿದೆ.ಶುಕ್ರವಾರ ಹಿರಣ್ಯಕೇಶಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರುವ ಪರಿಣಾಮ, ಪಟ್ಟಣದ ಮಠ ಗಲ್ಲಿಯ ಪ್ರಸಿದ್ಧ ದೇವಸ್ಥಾನ ಶಂಕರಲಿಂಗ (ಮಠ) ದೇವಸ್ಥಾನ ಆವರಣಕ್ಕೆ ನೀರು ಬಂದಿದೆ.ಭಕ್ತರಿಗೆ ದರ್ಶನ ನಿಷೇಧಿಸಲಾಗಿದೆ. ಪಟ್ಟಣದ ಲಕ್ಷ್ಮಿ ದೇವಸ್ಥಾನಕ್ಕೆ ನೀರು ಸುತ್ತುವರೆದಿದ್ದು, ಅರ್ಧದಷ್ಟು ಮುಳುಗಡೆಯಾಗಿದೆ. ಮಹಾರಾಷ್ಟ್ರದ ಚಿತ್ರಿ ಜಲಾಶದಿಂದ 50 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಹಿರಣ್ಯಕೇಶಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ನಿರ್ಮಾಣವಾಗಿದೆ. ತಾಲೂಕು ಆಡಳಿತವು ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದಲ್ಲಿನ ಮಠಗಲ್ಲಿ , ನದಿಗಲ್ಲಿ ಪ್ರದೇಶಗಳಲ್ಲಿನ ಜನ ಹಾಗೂ ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆ ಸೂಚಿಸಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕಾಡಳಿತ ಕಾಳಜಿ ಕೇಂದ್ರ ತೆರೆದು ಜನರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.