ಹಿರೇಬಂಡಾಡಿ ಸರ್ಕಾರಿ ಶಾಲೆಯಲ್ಲಿ 20 ಲಕ್ಷ ರು. ವೆಚ್ಚದ ಸುಸಜ್ಜಿತ ಕ್ರೀಡಾಂಗಣ
KannadaprabhaNewsNetwork | Published : Oct 23 2023, 12:15 AM IST
ಹಿರೇಬಂಡಾಡಿ ಸರ್ಕಾರಿ ಶಾಲೆಯಲ್ಲಿ 20 ಲಕ್ಷ ರು. ವೆಚ್ಚದ ಸುಸಜ್ಜಿತ ಕ್ರೀಡಾಂಗಣ
ಸಾರಾಂಶ
. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 20 ಲಕ್ಷ ರುಪಾಯಿ ವೆಚ್ಚದಲ್ಲಿ 200 ಮೀಟರ್ ಓಟದ ಸುಸಜ್ಜಿತ ಕ್ರೀಡಾಂಗಣ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಆಡಳಿತಗಾರರಿಗೆ ಇಚ್ಛಾಶಕ್ತಿಯೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಹಿರೆಬಂಡಾಡಿ ಗ್ರಾಪಂ ಉತ್ತಮ ಉದಾಹರಣೆಯಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 20 ಲಕ್ಷ ರುಪಾಯಿ ವೆಚ್ಚದಲ್ಲಿ 200 ಮೀಟರ್ ಓಟದ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ಇದೇ ಕ್ರೀಡಾಂಗಣದಲ್ಲಿ ಅ.26, 27ರಂದು ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ ನಡೆಯಲಿದೆ. ಹಿರೆಬಂಡಾಡಿಯ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣವನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿಸುವ ನಿಟ್ಟಿನಲ್ಲಿ ಈ ಹಿಂದಿನ ಶಾಸಕ ಸಂಜೀವ ಮಠದೂರು ಅವರ ಆಶಯದಂತೆ ಸರ್ಕಾರಿ ಅನುದಾನ ನಿರೀಕ್ಷಿಸಿ ಕಾರ್ಯೋನ್ಮುಖಗೊಳಿಸಲಾಗಿತ್ತು. ನಿರೀಕ್ಷಿತ ಅವಧಿಯಲ್ಲಿ ಅನುದಾನ ಲಭಿಸದೇ ಹೋದಾಗ, ಉದ್ಯೋಗ ಖಾತರಿ ಯೋಜನೆಯಡಿ ಉದ್ದೇಶಿತ ಕಾರ್ಯವನ್ನು ಪೂರ್ಣಗೊಳಿಸಲು ಗ್ರಾಪಂ ಆಡಳಿತ ಮುಂದಾಯಿತು. ಅದರಂತೆ ಗ್ರಾಪಂ ಆಡಳಿತ ಮಂಡಳಿಯು ಬರೋಬ್ಬರಿ 20 ಲಕ್ಷ ರು. ಅನುದಾನವನ್ನು ಉದ್ಯೋಗಖಾತರಿ ಯೋಜನೆಯಲ್ಲಿ ಕ್ರೂಡೀಕರಿಸಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯೊಂದು ಸುಸಜ್ಜಿತ ಕ್ರೀಡಾಂಗಣವನ್ನು ಹೊಂದಲು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಮಾಜಿ ಶಾಸಕ, ಕ್ರೀಡಾ ಕೂಟದ ಸ್ವಾಗತ ಸಮಿತಿಯ ಅಧ್ಯಕ್ಷ ಸಂಜೀವ ಮಠಂದೂರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1.25 ಮೀಟರ್ ಅಗಲದ 9 ಓಟದ ಪಥಗಳಿರುವ ಈ ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಉದ್ದ ಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ, ಗುಂಡೆಸೆತ, ಈಟಿ ಎಸೆತಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಹಿರೆಬಂಡಾಡಿ ಗ್ರಾಮದಿಂದ ಕ್ರೀಡಾ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕೆಂದು ಆಶಿಸಿದರು. 6 ವಿಭಾಗಗಳಲ್ಲಿ ನಡೆಯುವ 74 ಸ್ಪರ್ಧೆಯಲ್ಲಿ ಪ್ರಥಮ ದಿನ 44, ದ್ವಿತೀಯ ದಿನ 60 ಸುತ್ತುಗಳಲ್ಲಿ ಒಟ್ಟು 104 ಸುತ್ತುಗಳು ನಡೆಯಲಿದೆ. 899 ಕ್ರೀಡಾಪಟುಗಳು ಭಾಗವಹಿಸಲಿದ್ದು, 140 ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಲಿದ್ದರೆಂದು ಎಂದು ತಿಳಿಸಿದ್ದಾರೆ. ಕ್ರೀಡಾಮೃತ -೨೦೨೩ ಎಂಬ ಹೆಸರಿನೊಂದಿಗೆ ತಾಲೂಕು ಕ್ರೀಡಾಕೂಟವನ್ನು ಊರಿನ ಕ್ರೀಡಾಹಬ್ಬವಾಗಿ ಆಚರಿಸಲು ಸಿದ್ಧತೆ ನಡೆದಿರುವುದಾಗಿ ಮಾಹಿತಿ ನೀಡಿದರು. ಶಾಲೆಯ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಸತೀಶ್ ಹೆನ್ನಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಉಪಾಧ್ಯಕ್ಷೆ ಶಾಂಭವಿ, ಕ್ರೀಡಾಂಗಣ ಸಮಿತಿ ಅಧ್ಯಕ್ಷ ಶ್ರೀಧರ ಮಠಂದೂರು, ಮುಖ್ಯ ಶಿಕ್ಷಕ ಹರಿಕಿರಣ್ ಕೆ., ಗ್ರಾಪಂ ಸದಸ್ಯ ಹಮ್ಮಬ್ಬ ಶೌಕತ್ ಅಲಿ, ಪುರುಷೋತ್ತಮ ಮುಂಗ್ಲಿಮನೆ, ಬಾಲಚಂದ್ರ ಗೌಡ ಮತ್ತಿತರು ಹಾಜರಿದ್ದರು.