ಸಾರಾಂಶ
- ಸ್ಥಳಕ್ಕೆ ಭೇಟಿ ನೀಡಿ ಮನ ಒಲಿಸಿದ ತಾಲೂಕು ಅಧಿಕಾರಿಗಳು: ಮತದಾನಕ್ಕೆ ಒಪ್ಪಿದ ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಡಹಿನಬೈಲು ಗ್ರಾಮ ಪಂಚಾಯಿತಿಗೆ ಸೇರಿದ ಹಿರೇಬಿಸು-ಕರುಗುಂದ ಗ್ರಾಮದ ಸಂಪರ್ಕ ರಸ್ತೆ ದುರಸ್ತಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಚುನಾವಣಾ ಬಹಿಷ್ಕಾರ ಹಾಕುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಕಡಹಿನಬೈಲು ಗ್ರಾಮ ಪಂಚಾಯಿತಿಗೆ ಸೇರಿದ ಕರುಗುಂದ- ಹಿರೇಬಿಸು ಜನರು ಆರೋಪಿಸುವಂತೆ ಮುಖ್ಯ ರಸ್ತೆಯಿಂದ 1.30 ಕಿ.ಮೀ.ದೂರವಿರುವ ಈ ಸಂಪರ್ಕ ರಸ್ತೆ ದುರಸ್ತಿಯಾಗಿಲ್ಲ. ಹಿಂದಿನಿಂದಲೂ ಈ ರಸ್ತೆ ಹೊಂಡ, ಗುಂಡಿಗಳಿಂದ ಕೂಡಿದೆ. ಕೆಲವು ವರ್ಷಗಳ ಹಿಂದೆ ತಾಲೂಕು ಪಂಚಾಯಿತಿಯಿಂದ ಗ್ರಾವೆಲ್ ಮಣ್ಣು ಹಾಕಿ ಗುಂಡಿ ಮುಚ್ಚಲಾಗಿತ್ತು. ನಂತರ ದುರಸ್ತಿಯಾಗಿಲ್ಲ. ಈ ರಸ್ತೆಗೆ ಆಟೋದವರು ಸಹ ಬರಲು ಒಪ್ಪುತ್ತಿಲ್ಲ.15-20 ಮನೆಗಳಿವೆ. ಶಾಲಾ ಮಕ್ಕಳು ಶಿಕ್ಷಣ ಪಡೆಯಲು ಇದೇ ರಸ್ತೆಯಲ್ಲಿ ಹೋಗಬೇಕಾಗಿದೆ. ಈ ರಸ್ತೆ ದುರಸ್ತಿ ಮಾಡದೆ ಇದ್ದರೆ ನಾವು ಮತದಾನ ಮಾಡುವುದಿಲ್ಲ ಎಂದು ಆ ಭಾಗದ ಜನರು ಶುಕ್ರವಾರ ಬೆಳಿಗ್ಗೆ ಮತದಾನದ ಬಹಿಷ್ಕಾರದ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. ಈಗಾಗಲೇ ತಹಸೀಲ್ದಾರ್, ತಾಲೂಕು ಇ.ಓ ಅವರಿಗೆ ಚುನಾವಣಾ ಬಹಿಷ್ಕಾರದ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೆ ರಿಜಿಸ್ಟರ್ ಪೋಸ್ಟ್ ಮಾಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.ಸ್ಥಳಕ್ಕೆ ತಾಲೂಕು ಆಡಳಿತ ಭೇಟಿ: ಶುಕ್ರವಾರ ಬೆಳಿಗ್ಗೆ ಆ ಭಾಗದ ಮತದಾರರು ಪ್ರತಿಭಟನೆ ಮಾಡಿದ್ದರು. ಮಧ್ಯಾಹ್ನ ಹೊತ್ತಿಗೆ ತಹಸೀಲ್ದಾರ್ ರಮೇಶ್, ತಾಲೂಕು ಪಂಚಾಯತಿ ಇ.ಒ.ನವೀನ್ ಕುಮಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಮಂಜುನಾಥ್,ಪಿ.ಡಿ.ಒ ವಿಂದ್ಯಾ ಭೇಟಿ ನೀಡಿ ಆ ಭಾಗದ ಮತದಾರರ ಸಮಸ್ಯೆ ಆಲಿಸಿದರು. ಮತದಾನ ಬಹಿಷ್ಕಾರ ಮಾಡಬೇಡಿ. ನಿಮ್ಮ ಊರಿನ ರಸ್ತೆ ದುರಸ್ತಿ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇವೆ. ಜಿಲ್ಲಾಧಿಕಾರಿಗಳಿಗೆ, ಚುನಾವಣಾ ಆಯುಕ್ತರಿಗೆ ಪತ್ರ ಬರೆಯುತ್ತೇವೆ. ಚುನಾವಣೆಯಲ್ಲಿ ಭಾಗವಹಿಸಿರಿ ಎಂದು ಮನ ಒಲಿಸಿದ್ದೇವೆ ಎಂದು ತಾಲೂಕು ಪಂಚಾಯಿತಿ ಇ.ಒ.ನವೀನ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.