ಸಾರಾಂಶ
ಗುಳೇದಗುಡ್ಡ: ನಾಲ್ಕೈದು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕೋಟೆಕಲ್-ಗುಳೇದಗುಡ್ಡ ಹಿರೇಹಳ್ಳದ ದಿಡಗಿನ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ನಾಲ್ಕೈದು ದಿನಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲು ಉತ್ತಮ ಮಳೆ ಸುರಿಯುತ್ತಿರುವುದರಿಂದ ಕೋಟೆಕಲ್-ಗುಳೇದಗುಡ್ಡ ಹಿರೇಹಳ್ಳದ ದಿಡಗಿನ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಎರಡು ದಿನಗಳಿಂದ ಈ ಜಲಪಾತ ಮೈದುಂಬಿ ಹರಿಯುತ್ತಿದ್ದು, ಶನಿವಾರ, ಭಾನುವಾರ ಯುವಕರು, ಯುವತಿಯರು ಜಲಪಾತಕ್ಕೆ ಭೇಟಿ ನೀಡಿ ಧುಮ್ಮಿಕ್ಕಿ ಹರಿಯುವ ನೀರಿಗೆ ಮೈಯೊಡ್ಡಿ ಜಲಕ್ರೀಡೆಯಾಡಿ ಸಂಭ್ರಮಿಸುತ್ತಿದ್ದಾರೆ.
ಕುಟುಂಬ ಸಮೇತರಾಗಿ ಈ ಜಲಪಾತಕ್ಕೆ ಭೇಟಿ ಕೊಡುತ್ತಿರುವುದು ಕಂಡುಬಂತು. ಈ ಜಲಪಾತಕ್ಕೆ ಸರಿಯಾದ ಮಾರ್ಗವಿಲ್ಲದಿದ್ದರೂ ಜನ ಗುಡ್ಡದ ಕಲ್ಲುಗಳನ್ನು ತುಳಿಯುತ್ತ, ಕಷ್ಟಪಟ್ಟು ಹೋಗುತ್ತಿರುವುದು ಕಂಡು ಬಂತು. ಕೋಟೆಕಲ್ ಗ್ರಾಪಂ ವ್ಯಾಪ್ತಿಗೆ ಈ ಜಲಪಾತ ಒಳಪಟ್ಟರೂ ಗ್ರಾಪಂ ಮಾತ್ರ ಜಲಪಾತದವರೆಗೆ ಸುಗಮ ಮಾರ್ಗ ಮಾಡುತ್ತಿಲ್ಲ ಎಂಬುದು ಜನರ ಅಳಲು.ತಾಲೂಕಿನ ಕೆಲವಡಿ, ಕೋಟೆಕಲ್, ಲಾಯದಗುಂದಿ, ಆಸಂಗಿ, ಪರ್ವತಿ, ತೋಗುಣಶಿ, ತೆಗ್ಗಿ, ಹಂಸನೂರ, ಪಾದನಕಟ್ಟಿ, ಅಲ್ಲೂರ ಎಸ್.ಪಿ. ಸೇರಿದಂತೆ ನಾನಾ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಗ್ರಾಮೀಣ ಪ್ರದೇಶಗಳ ಜಮೀನುಗಳು ನೀರಿನಿಂದ ಆವರಿಸಿದ್ದು, ಒಂದು ವರ್ಷದಿಂದ ಉತ್ತಮ ಮಳೆ ನೋಡದಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.