ಹೋಂ ಗಾರ್ಡ್‌ ಬದಲಾವಣೆ ನೆಪದಲ್ಲಿ ಗುಂಡ್ಲುಪೇಟೆಯ ಹಿರೀಕಾಟಿ ಖನಿಜ ತನಿಖಾ ಠಾಣೆ ಬಾಗಿಲು ಮುಚ್ಚಿರುವ ಕಾರಣ ರಾಯಲ್ಟಿ/ಎಂಡಿಪಿ ವಂಚಿಸಿ ಹಗಲು ರಾತ್ರಿ ಇನ್ನದೆ ಕಲ್ಲು ಹಾಗೂ ಕ್ರಷರ್‌ ಉತ್ಪನ್ನಗಳು ರಾಜಾರೋಷವಾಗಿ ತೆರಳುತ್ತಿವೆ.

ಹೋಂ ಗಾರ್ಡ್‌ ಬದಲು ನೆಪ । ಹಗಲು, ರಾತ್ರಿ ಟಿಪ್ಪರ್‌ ಆರ್ಭಟ, ರಾಯಲ್ಟಿ ವಂಚನೆ । ಚೆಕ್‌ಪೋಸ್ಟ್‌ ಇದ್ದಾಗಲೇ ಅಕ್ರಮ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಹೋಂ ಗಾರ್ಡ್‌ ಬದಲಾವಣೆ ನೆಪದಲ್ಲಿ ಹಿರೀಕಾಟಿ ಖನಿಜ ತನಿಖಾ ಠಾಣೆ ಬಾಗಿಲು ಮುಚ್ಚಿರುವ ಕಾರಣ ರಾಯಲ್ಟಿ/ಎಂಡಿಪಿ ವಂಚಿಸಿ ಹಗಲು ರಾತ್ರಿ ಇನ್ನದೆ ಕಲ್ಲು ಹಾಗೂ ಕ್ರಷರ್‌ ಉತ್ಪನ್ನಗಳು ರಾಜಾರೋಷವಾಗಿ ತೆರಳುತ್ತಿವೆ.

ಕನ್ನಡಪ್ರಭ ಪತ್ರಿಕೆಯ ನಿರಂತರ ವರದಿ ಹೋರಾಟದ ಫಲವಾಗಿ ಒಲ್ಲದ ಮನಸ್ಸಿನಿಂದಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಾಲೂಕಿನ ಹಿರೀಕಾಟಿ ಗೇಟ್‌ ಬಳಿ ಖನಿಜ ತನಿಖಾ ಠಾಣೆ ಆರಂಭಿಸಿತ್ತು.

ಪ್ರತಿನಿತ್ಯ ಸರ್ಕಾರಕ್ಕೆ ಲಕ್ಷಾಂತರ ರು. ರಾಜಧನ ವಂಚನೆ ಆಗುತ್ತಿದೆ. ಆದರೂ ಜಿಲ್ಲಾಡಳಿತ ಹೋಂ ಗಾರ್ಡ್‌ ಬದಲಾವಣೆ ನೆಪದಲ್ಲಿ ಖನಿಜ ತನಿಖಾ ಠಾಣೆ ಬಂದ್‌ ಮಾಡುವ ಮೂಲಕ ರಾಜಧನ ಸೋರಿಕೆಗೆ ಜಿಲ್ಲಾಡಳಿತವೇ ಕಾರಣವಾಗಿದೆ.

ಹಿರೀಕಾಟಿ ಖನಿಜ ತನಿಖಾ ಠಾಣೆಗೆ ಬೀಗ ಬಿದ್ದಿದೆ. ಇಂಥ ಅವಕಾಶ ಸದುಪಯೋಗ ಪಡಿಸಿಕೊಂಡು ನೂರಾರು ಟಿಪ್ಪರ್‌ಗಳಲ್ಲಿ ಕಲ್ಲು ಹಾಗೂ ಕ್ರಷರ್‌ನ ಉತ್ಪನ್ನ ಸಾಗಿಸಿ ರಾಜಧನ ವಂಚಿಸುತ್ತಿರುವುದು ಜಗಜ್ಜಾಹೀರಾಗಿದೆ.

ಹಿರೀಕಾಟಿ ಖನಿಜ ತನಿಖಾ ಠಾಣೆ ಸಿಬ್ಬಂದಿ ಇರುವಾಗಲೇ ಠಾಣೆಯ ಸಿಬ್ಬಂದಿ ಕಣ್ತಪ್ಪಿಸಿ ರಾಯಲ್ಟಿ ಹಾಗೂ ಎಂಡಿಪಿ ವಂಚಿಸಿ ಕರಗತ ಮಾಡಿಕೊಂಡಿರುವ ಕೆಲ ಕ್ರಷರ್‌, ಕ್ವಾರಿ ಮಾಲೀಕರು ಈಗ ಖನಿಜ ತನಿಖಾ ಠಾಣೆ ಬಾಗಿಲಿಗೆ ಬೀಗ ಹಾಕಿರುವಾಗ ಬಿಡುತ್ತಾರೆಯೇ ಎಂದು ಗ್ರಾಮದ ಪ್ರಸನ್ನ, ಶ್ರೀಧರ್‌ ಪ್ರಶ್ನಿಸುತ್ತಾರೆ.

ಹೋಂ ಗಾರ್ಡ್‌ ಬದಲಾವಣೆ ಮಾಡಿ ಬೇರೆ ಸಿಬ್ಬಂದಿ ನೇಮಿಸಲು ಖನಿಜ ತನಿಖಾ ಠಾಣೆ ಮುಚ್ಚುವುದು ಯಾವ ನ್ಯಾಯ ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಪ್ರಶ್ನೆ ಮಾಡಿದ್ದಾರೆ.

ಕರೆ ಸ್ವೀಕರಿಸಿದ ಅಧಿಕಾರಿಗಳು:

ಖನಿಜ ತನಿಖಾ ಠಾಣೆ ಮುಚ್ಚಿರುವ ಸಂಬಂಧ ಮಾಹಿತಿ ಪಡೆಯಲು ಕನ್ನಡಪ್ರಭ ಪತ್ರಿಕೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಜೇಶ್‌ ಹಾಗೂ ಬೇಗೂರು ಭಾಗದ ಕಿರಿಯ ಭೂ ವಿಜ್ಞಾನಿ ಪುಷ್ಪ ಅವರನ್ನು ಮೊಬೈಲ್‌ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಮೊಬೈಲ್‌ ಕರೆ ಸ್ವೀಕರಿಸಲು ನಿರಾಕರಿಸಿದ್ದಾರೆ.