ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರೇವಡೆಯರ್‌ ಆಯ್ಕೆ

| Published : Feb 16 2025, 01:45 AM IST

ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರೇವಡೆಯರ್‌ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರ ಸ್ಥಾನಕ್ಕಾಗಿ ಪ್ರಮುಖವಾಗಿ ಐವರ ಹೆಸರುಗಳನ್ನು ಪ್ರಸ್ತಾಪಿಸಲಾಗಿತ್ತು

ನರೇಗಲ್ಲ: ಸಮೀಪದ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದಲ್ಲಿ ಫೆ. 20 ರಂದು ನಡೆಯಲಿರುವ ಗಜೇಂದ್ರಗಡ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕೋಡಿಕೊಪ್ಪದ ಸಾಹಿತಿ ಎಂ.ಎ. ಹಿರೇವಡೆಯರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದಲ್ಲಿ ಶಾಸಕ ಜಿ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸರ್ವಾಧ್ಯಕ್ಷರ ಆಯ್ಕೆ ಜರುಗಿತು.

ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅಭಿನವ ಚನ್ನಬಸವ ಸ್ವಾಮೀಜಿ, ಲಿಂ.ಚನ್ನಬಸವ ಸ್ವಾಮೀಜಿ ಹಾಗೂ ಲಿಂ.ಶಿವಬಸವ ಸ್ವಾಮೀಜಿಗಳು ಕನ್ನಡ ಸಾಹಿತ್ಯ ಸಮ್ಮೇಳ ಶ್ರೀಮಠದಲ್ಲಿ ಹಮ್ಮಿಕೊಳ್ಳುವ ಬಯಕೆ ಹೊಂದಿದ್ದರು. ಆದರೆ ಅದಕ್ಕೆ ಈಗ ಕಾಲ ಕೂಡಿ ಬಂದಿದ್ದು, ಹಾನಗಲ್ಲ ಗುರು ಕುಮಾರೇಶ್ವರರ ಕೃಪೆಯಿಂದ ಪ್ರಾರಂಭಗೊಂಡ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಗುರು ಕುಮಾರೇಶ್ವರರ ಜೀವನ ಚರಿತ್ರೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುವ ಮೂಲಕ ಗುರು ಕುಮಾರೇಶ್ವರರನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಹೊಂದಿದ ನರೇಗಲ್ಲದ ಎಂ.ಎ.ಹಿರೇವಡೆಯರ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಕನ್ನಡ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ನಾಡಿನ ಮಠಗಳ ಪಾತ್ರ ಅನನ್ಯವಾಗಿದೆ. ಕನ್ನಡ ಸಾಹಿತ್ಯ ಮತ್ತು ಮಠಗಳಿಗೆ ಅವಿನಾಭಾವ ಸಂಬಂಧವಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರ ಸ್ಥಾನಕ್ಕಾಗಿ ಪ್ರಮುಖವಾಗಿ ಐವರ ಹೆಸರುಗಳನ್ನು ಪ್ರಸ್ತಾಪಿಸಲಾಗಿತ್ತು, ಐವರು ಸರ್ವಾಧ್ಯಕ್ಷರಾಗಲು ಅರ್ಹರೇ. ಆದರೆ, ಒಬ್ಬರನ್ನು ಮಾತ್ರ ಆಯ್ಕೆ ಮಾಡಬೇಕಿರುವುದರಿಂದ ಹಿರಿತನ ಪರಿಗಣಿಸಿ ಎಂ.ಎ.ಹಿರೇವಡೆಯರ ಅವರನ್ನು ಆಯ್ಕೆ ಮಾಡಲಾಗಿದೆ. ಫೆ.19 ರಂದು ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರ ನಿವಾಸದಿಂದ ನರೇಗಲ್ಲ, ಮಾರನಬಸರಿ, ನಿಡಗುಂದಿ ಮಾರ್ಗವಾಗಿ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಕವಿ ಗೋಷ್ಠಿ, ವಿಚಾರ ಸಂಕಿರಣ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಜರುಗಲಿದ್ದು, ಕನ್ನಡದ ಮನಸ್ಸುಗಳು ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಲಾಂಛನವನ್ನು ಶಾಸಕ ಜಿ.ಎಸ್.ಪಾಟೀಲ ಬಿಡುಗಡೆಗೊಳಿಸಿದರು. ಕಸಾಪ ತಾಲೂಕಾಧ್ಯಕ್ಷ ಅಮರೇಶ ಗಾಣಗೇರ, ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ, ಅನ್ನಪೂರ್ಣ ಪಾಟೀಲ, ಮಂಜುಳಾ ರೇವಡಿ, ಕಿಶೋರಬಾಬು ನಾಗರಕಟ್ಟಿ, ಡಾ.ಕೆ.ಬಿ.ಧನ್ನೂರ, ಎಚ್.ಎಚ್. ಅಬ್ಬಿಗೇರಿ, ಬಸವರಾಜ ಕುರಿ, ಎಂ.ಎಚ್. ಸಿದ್ದಿಕ್, ಅಂದಪ್ಪ ಬಿಳ್ಳೂರ ಸೇರಿದಂತೆ ಇತರರಿದ್ದರು. ಶಿಕ್ಷಕ ಸುರೇಶ ಹಳ್ಳಿಕೇರಿ ನಿರೂಪಿಸಿ ಸ್ವಾಗತಿಸಿದರು.