ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಒಲ್ಲದ ಮನಸ್ಸಿನಿಂದಲೇ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆರಂಭಿಸಿರುವ ತಾಲೂಕಿನ ಹಿರೀಕಾಟಿ ಗೇಟ್ ಬಳಿ ಖನಿಜ ತನಿಖಾ ಠಾಣೆ ಈ ತಿಂಗಳ ಮೊದಲ ವಾರದಲ್ಲಿ ೨ನೇ ಬಾರಿಗೆ ಮುಚ್ಚಿದೆ.ಹೋಂ ಗಾರ್ಡ್ ಬದಲಾವಣೆ ಮಾಡುವ ನೆಪದಲ್ಲಿ ಜಿಲ್ಲಾಡಳಿತ ಒಂದಲ್ಲ ಒಂದು ತಿಂಗಳಲ್ಲಿ ಹೋಂ ಗಾರ್ಡ್ ಮುಚ್ಚುವುದು ಸಾಮಾನ್ಯ ವಿಷಯ. ತಿಂಗಳ ಮೊದಲೆರಡು ದಿನಗಳ ಕಾಲ ಚೆಕ್ ಪೋಸ್ಟ್ ಮುಚ್ಚುವುದು ಕ್ರಷರ್, ಟಿಪ್ಪರ್ ಮಾಲೀಕರಿಗೆ ಸಂತಸವೋ ಸಂತಸ ತರುತ್ತಿದೆ. ಹೋಂ ಗಾರ್ಡ್ ಬದಲಿಸುವ ನೆಪದಲ್ಲಿ ಹಿರೀಕಾಟಿ ಖನಿಜ ತನಿಖಾ ಠಾಣೆ ಬಾಗಿಲು ಮಂಗಳವಾರ ಸಂಜೆಯಿಂದಲೇ ಮುಚ್ಚಿರುವ ಕಾರಣ ರಾಯಲ್ಟಿ/ಎಂಡಿಪಿ ವಂಚಿಸಿ ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳು ತೆರಳುತ್ತಿವೆ. ಪ್ರತಿನಿತ್ಯ ಸರ್ಕಾರಕ್ಕೆ ರಾಜಧನ ಲಕ್ಷಾಂತರ ರು.ವಂಚನೆಯಂತೂ ಆಗುತ್ತಿದೆ. ಆದರೂ ಜಿಲ್ಲಾಡಳಿತ ಹೋಂ ಗಾರ್ಡ್ ಬದಲಾವಣೆ ನೆಪದಲ್ಲಿ ಖನಿಜ ತನಿಖಾ ಠಾಣೆ ಬಂದ್ ಮಾಡುವ ಮೂಲಕ ರಾಜಧನ ಸೋರಿಕೆಗೆ ಜಿಲ್ಲಾಡಳಿತವೇ ಕಾರಣವಾಗಿದೆ.
ಹಿರೀಕಾಟಿ ಖನಿಜ ತನಿಖಾ ಠಾಣೆಗೆ ಹೋಂ ಗಾರ್ಡ್ ಇಲ್ಲದೆ ಬೀಗ ಬಿದ್ದಿದೆ. ಇಂಥ ಅವಕಾಶ ಸದುಪಯೋಗಪಡಿಸಿಕೊಂಡು ನೂರಾರು ಟಿಪ್ಪರ್‌ಗಳಲ್ಲಿ ಕಲ್ಲು ಹಾಗೂ ಕ್ರಷರ್‌ನ ಉತ್ಪನ್ನವನ್ನು ರಾಜಧನ ವಂಚಿಸಿ ಸರ್ಕಾರಕ್ಕೆ ವಂಚಿಸುತ್ತಿರುವುದು ಇದೇನು ಮೊದಲಲ್ಲ. ಹಿರೀಕಾಟಿ ಖನಿಜ ತನಿಖಾ ಠಾಣೆ ಸಿಬ್ಬಂದಿ ಇರುವಾಗಲೇ ಠಾಣೆಗೆ ಸಿಬ್ಬಂದಿ ಯಾಮಾರಿಸಿ ರಾಯಲ್ಟಿ, ಎಂಡಿಪಿ ವಂಚಿಸಿ ಕರಗತ ಮಾಡಿಕೊಂಡಿರುವ ಕೆಲ ಕ್ರಷರ್, ಕ್ವಾರಿ ಮಾಲೀಕರು ಈಗ ಖನಿಜ ತನಿಖಾ ಠಾಣೆ ಬಾಗಿಲಿಗೆ ಬೀಗ ಹಾಕಿರುವಾಗ ಬಿಟ್ಟಾರೆಯೇ ಎಂದು ಗ್ರಾಮದ ಪ್ರಸನ್ನ ಪ್ರಶ್ನಿಸಿದ್ದಾರೆ.ಹೋಂ ಗಾರ್ಡ್ ಬದಲಾವಣೆ ಮಾಡಿ ಬೇರೆ ಸಿಬ್ಬಂದಿ ನೇಮಿಸಲು ಖನಿಜ ತನಿಖಾ ಠಾಣೆ ಮುಚ್ಚುವುದು ಇದ್ಯಾವ ನ್ಯಾಯ, ಇದೆಂತ ಆಡಳಿತ ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.
ಚೆಕ್ ಪೋಸ್ಟ್ ಮುಚ್ಚಿರುವ ಕಾರಣ ರಾಜಧನ ವಂಚನೆಯಾಗುತ್ತಿದೆಯಲ್ಲ ಎಂಬ ಕನ್ನಡಪ್ರಭ ಪ್ರಶ್ನೆಗೆ ಚಾಮರಾಜನಗರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ರಾಜೇಶ್ ಪ್ರತಿಕ್ರಿಯಿಸಿ ಜಿಪಿಎಸ್ ಸರ್ವೇಯಾದ್ರೆ ಹೆಚ್ಚು ಕಲ್ಲು ತೆಗೆದಿದ್ದಕ್ಕೆ ದಂಡ ಕಟ್ಟಬೇಕಾಗುತ್ತದೆ ಎಂದಿದ್ದಾರೆ.ಹೋಂ ಗಾರ್ಡ್ ತಪಾಸಣೆ:
ಹೋಂ ಗಾರ್ಡ್ ಮೂಲಕ ಹಿರೀಕಾಟಿ ಖನಿಜ ತನಿಖಾ ಠಾಣೆ ತಪಾಸಣೆಯನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಡೆಸುತ್ತಿದೆ. ಆಗೊಮ್ಮ, ಈಗೊಮ್ಮೆ ಭೂ ವಿಜ್ಞಾನಿ ಬಂದು ಹೋಗುವುದು ಬಿಟ್ಟರೆ ಹೋಂ ಗಾರ್ಡ್‌ಗಳೇ ತಪಾಸಣೆ ನಡೆಸುತ್ತಾರೆ. ಕೇವಲ ಖನಿಜ ತನಿಖಾ ಠಾಣೆಗೆ ಹೋಂ ಗಾರ್ಡ್ ನೇಮಿಸಿದ್ದೇ ಜಿಲ್ಲಾ ಮತ್ತು ಭೂ ವಿಜ್ಞಾನ ಇಲಾಖೆಯ ಸಾಧನೆಯಾಗಿದೆ. ಪ್ರತಿ ದಿನ ಭೂ ವಿಜ್ಞಾನಿಯೊಬ್ಬರು ನಿಂತು ತಪಾಸಣೆ ನಡೆಸಿದರೆ ಪ್ರತಿ ನಿತ್ಯ ಲಕ್ಷಾಂತರ ರುಪಯಿ ರಾಜಧನ ಸರ್ಕಾರಕ್ಕೆ ಬರಲಿದೆ. ಆ ಕೆಲಸ ಮಾಡಲು ಜಿಲ್ಲಾಡಳಿತ ಮುಂದಾಗಿಲ್ಲ ಎಂಬುದೇ ದುರಂತ.ಪ್ರತಿ ತಿಂಗಳ ಮೊದಲ ದಿನಗಳಲ್ಲಿ ಖನಿಜ ತನಿಖಾ ಠಾಣೆಗೆ ನೇಮಕಗೊಂಡ ಹೋಂ ಗಾರ್ಡ್ ಬದಲಾವಣೆ ಸಹಜ ಪ್ರಕ್ರಿಯೆ. ಹೋಂ ಗಾರ್ಡ್ ನೇಮಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ. ಖನಿಜ ತನಿಖಾ ಠಾಣೆಗೆ ಎರಡು ಮೂರು ದಿನ ಹೋಂ ಗಾರ್ಡ್ ಬರಲ್ಲ. ಭೂ ವಿಜ್ಞಾನಿ ಕಳುಹಿಸಲು ಹೇಳುತ್ತೇನೆ. ರಾಜೇಶ್, ಹಿರಿಯ ಭೂ ವಿಜ್ಞಾನಿ