ಸಾರಾಂಶ
ಗುಂಡ್ಲುಪೇಟೆಯ ಹಿರೀಕಾಟಿ ಗೇಟ್ ಬಸ್ ಶೆಲ್ಟರ್ ಮುಂದಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಓವರ್ ಲೋಡ್ ಟಿಪ್ಪರ್‌ಗಳ ಓಡಾಟದಿಂದ ತಾಲೂಕಿನ ಹಿರೀಕಾಟಿ ಗೇಟ್ ಬಳಿಯ ಸರ್ವೀಸ್ ರಸ್ತೆ ಗುಂಡಿಗಳ ತಾಣವಾಗಿದ್ದು ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಮೈಸೂರು-ಊಟಿ ಹೆದ್ದಾರಿಯ ಚಿಕ್ಕಹುಂಡಿ ಗೇಟ್ ನಿಂದ ಹಿರೀಕಾಟಿ ಗೇಟ್ ತನಕ ಹೊಸದಾಗಿ ಆರಂಭವಾದ ಪೆಟ್ರೋಲ್ ಬಂಕ್ ಮಾಲೀಕರು ಹೆದ್ದಾರಿ ಬದಿ ಸರ್ವೀಸ್ ರಸ್ತೆ ಮಾಡಿಸಿದ್ದರು.
ಆದರೆ, ಹಿರೀಕಾಟಿ ಗೇಟ್‌ನ ಪಶ್ಚಿಮ ಭಾಗದ ಕ್ರಷರ್‌ನಿಂದ ಓವರ್ ಲೋಡ್ ಎಂ.ಸ್ಯಾಂಡ್, ಜಲ್ಲಿ ತುಂಬಿದ ಟಿಪ್ಪರ್‌ಗಳು ಹಿರೀಕಾಟಿ ಗೇಟ್ ನ ಎಡಕ್ಕೆ ಹೋದಾಗ ಸರ್ವೀಸ್ ರಸ್ತೆ ಸಂಪೂರ್ಣ ಹಾಳಾಗಿ ಗುಂಡಿ ಬಿದ್ದಿದೆ.ಸರ್ವೀಸ್ ರಸ್ತೆಯು ಓವರ್ ಲೋಡ್ ಟಿಪ್ಪರ್ ಗಳ ಸಂಚಾರದಿಂದಲೇ ಹಾಳಾಗಿದೆ. ಅಲ್ಲದೆ ಕ್ರಷರ್‌ನಿಂದ ಬರುವ ಟಿಪ್ಪರ್‌ನಲ್ಲಿ ಜಲ್ಲಿ ಓವರ್ ಲೋಡ್ ತುಂಬಿ ಬರುವ ಕಾರಣ ಹಿರೀಕಾಟಿ ಗೇಟ್ ಬಳಿ ಎಡಕ್ಕೆ ಅಥವಾ ಬಲಕ್ಕೆ ತಿರುಗಿದಾಗ ಜಲ್ಲಿ ಹೆದ್ದಾರಿಗೆ ಚೆಲ್ಲುತ್ತಿದೆ.
ಹಿರೀಕಾಟಿ ಗೇಟ್ ಬಳಿ ಬಸ್ ಶೆಲ್ಟರ್ ಮುಂದೆ ಬಸ್ ಹತ್ತಲು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ನಿಲ್ಲುತ್ತಿದ್ದಾರೆ. ಈಗ ಮಳೆ ಸುರಿವ ಕಾರಣ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಂತಿದೆ.ಕಡಿವಾಣ ಹಾಕಲಿ: ಟಿಪ್ಪರ್‌ಗಳಲ್ಲಿ ಬಹುತೇಕರು ಓವರ್ ಲೋಡ್ ತುಂಬಿಕೊಂಡು ಹೋಗುವುದರಿಂದಲೇ ಹಿರೀಕಾಟಿ ಗೇಟ್ ಬಳಿಯ ರಸ್ತೆಯಲ್ಲಿ ಗುಂಡಿಗಳು ಬೀಳಲು ಕಾರಣವಾಗಿದೆ. ಕೂಡಲೇ ತಾಲೂಕು ಆಡಳಿತ ಎಚ್ಚೆತ್ತು ಓವರ್ ಲೋಡ್ ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಹಿರೀಕಾಟಿ ಗ್ರಾಮದ ಪ್ರಸನ್ನ ಒತ್ತಾಯಿಸಿದ್ದಾರೆ.