ಹಿರಿಯೂರು: ಡಿ.11ಕ್ಕೆ ಕೆಎಸ್ ಆರ್ ಟಿಸಿ ಬಸ್ ಡಿಪೋ ಮುಂದೆ ಅಹೋರಾತ್ರಿ ಧರಣಿ

| Published : Dec 05 2024, 12:30 AM IST

ಹಿರಿಯೂರು: ಡಿ.11ಕ್ಕೆ ಕೆಎಸ್ ಆರ್ ಟಿಸಿ ಬಸ್ ಡಿಪೋ ಮುಂದೆ ಅಹೋರಾತ್ರಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಸಾರಿಗೆ ಬಸ್ ಡಿಪೋ ಆರಂಭಿಸಬೇಕೆಂದು ಒತ್ತಾಯಿಸಿ ಡಿ. 11 ರಂದು ಕೆಎಸ್ ಆರ್ ಟಿಸಿ ಬಸ್ ಡಿಪೋ ಮುಂಭಾಗ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಗ್ರಾಮೀಣ ಸಾರಿಗೆ ಬಸ್ ಡಿಪೋ ಆರಂಭಿಸಬೇಕೆಂದು ಒತ್ತಾಯಿಸಿ ಡಿ. 11 ರಂದು ಕೆಎಸ್ ಆರ್ ಟಿಸಿ ಬಸ್ ಡಿಪೋ ಮುಂಭಾಗ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ ಹೇಳಿದರು.

ನಗರದ ರೈತಸಂಘದ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಮಾಸಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈಗಾಗಲೇ ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ ಒದಗಿಸಿ ಎಂದು ಹಲವಾರು ಬಾರಿ ಹೋರಾಟ ಮಾಡಿ ಮನವಿ ಮಾಡಲಾಗಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಗ್ರಾಮೀಣ ಸಾರಿಗೆ ಆರಂಭಿಸಲು ಕೊಟ್ಟ ಗಡುವು ಮುಗಿದು ಒಂದು ತಿಂಗಳಾದರೂ ಸಹ ಡಿಪೋ ಪ್ರಾರಂಭಿಸಿಲ್ಲ. ಆದ್ದರಿಂದ ಬರುವ 11 ನೇ ತಾರೀಕಿನ ಬುಧವಾರದಿಂದ ಕೆಎಸ್ಆರ್ ಟಿಸಿ ಡಿಪೋ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬರುವ 9 ನೇ ತಾರೀಕು ಜೆಜೆ ಹಳ್ಳಿ, ಐಮಂಗಲ, ಕಸಬಾ ಹೋಬಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಹಿರಿಯೂರು ಬಂದ್ ಆಚರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಹಿರಿಯೂರು ತಾಲೂಕಿಗೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಗಮಿಸುವ ಸೂಚನೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೀಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು ಬರುವುದರೊಳಗಾಗಿ ನಾವು ಒತ್ತಾಯಿಸಿರುವ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಆದೇಶ ಬಾರದೇ ಇದ್ದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಘೇರಾವ್ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಎಂಆರ್ ಈರಣ್ಣ, ಮಾಜಿ ಎಪಿಎಂಸಿ ಸದಸ್ಯ ಈರಣ್ಣ, ರಾಮಣ್ಣ, ತಿಮ್ಮಾರೆಡ್ಡಿ, ರಂಗಸ್ವಾಮಿ, ಜಗನ್ನಾಥ್, ಶಿವಣ್ಣ, ಜಯಣ್ಣ, ಹೊಸಕೆರೆ ನಾರಾಯಣಪ್ಪ, ರಾಜಪ್ಪ, ರಮೇಶ್, ನಾಗರಾಜಪ್ಪ, ವಿರುಪಾಕ್ಷ, ಬಾಲರಾಜ್, ದೊರೆಸ್ವಾಮಿ, ಆರ್ ಕೆ. ಗೌಡ ಮುಂತಾದವರು ಹಾಜರಿದ್ದರು.