ಸಾರಾಂಶ
ಫಕ್ಕೀರಪ್ಪ ಕಮ್ಮಾರ (50) ಹಾಗೂ ಅಶೋಕ ಕಮ್ಮಾರ (45) ಮಧ್ಯೆ ಆಸ್ತಿ ವಿವಾದದಿಂದ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಧಾರವಾಡ: ಹುಟ್ಟುತ್ತಲೇ ಅಣ್ಣ-ತಮ್ಮಂದಿರು, ಬೆಳೆಯುತ್ತ ದಾಯಾದಿಗಳು ಎನ್ನುವ ಮಾತು ಈ ಪ್ರಕರಣದಲ್ಲಿ ಸತ್ಯವಾಗಿದೆ. ಒಂದೇ ರಕ್ತ ಹಂಚಿಕೊಂಡು ಹುಟ್ಟಿದರೂ ಆಸ್ತಿ ವಿಚಾರಕ್ಕೆ ಸಹೋದರರ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದ್ದು, ಒಡಹುಟ್ಟಿದ ತಮ್ಮ ಎನ್ನದೇ ಅಣ್ಣನು ಆತನನ್ನು ಕೊಲೆ ಮಾಡಿರುವ ದುರ್ಘಟನೆ ಬುಧವಾರ ತಾಲೂಕಿನ ತಲವಾಯಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಫಕ್ಕೀರಪ್ಪ ಕಮ್ಮಾರ (50) ಹಾಗೂ ಅಶೋಕ ಕಮ್ಮಾರ (45)ಅಣ್ಣ-ತಮ್ಮಂದಿರು. ಇವರ ಸಹೋದರಿ ತನಗೆ ಬಂದಿದ್ದ ಜಾಗೆಯನ್ನು ಸಹೋದರ ಅಶೋಕನಿಗೆ ಬಿಟ್ಟು ಕೊಟ್ಟಿದ್ದಳು. ಅಲ್ಲದೇ ಆಕೆ ತನ್ನ ಮಗಳನ್ನು ಕೂಡ ಅಶೋಕನಿಗೆ ಕೊಟ್ಟು ಮದುವೆ ಮಾಡಿದ್ದಳು. ಈ ಜಾಗೆಯಲ್ಲಿ ಸರ್ಕಾರ ಮನೆ ಕಟ್ಟಲು ಅನುದಾನ ನೀಡಿತ್ತು. ಇದು ಫಕ್ಕಿರಪ್ಪನ ಕಣ್ಣು ಕೆಂಪು ಮಾಡಿತ್ತು. ಆಗಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಬುಧವಾರ ಏಕಾಏಕಿ ಫಕ್ಕೀರಪ್ಪ, ಅಕ್ಕನಿಗೆ ಕೊಟ್ಟ ಜಾಗೆಯಲ್ಲಿ ನೀನೇಕೆ ಮನೆ ಕಟ್ಟುತ್ತೀಯಾ ಎಂದು ತನ್ನ ಕುಟುಂಬಸ್ಥರೊಂದಿಗೆ ಜಗಳಕ್ಕೆ ನಿಂತಿದ್ದನು. ಎರಡೂ ಗುಂಪುಗಳ ನಡುವೆ ಬಡಿಗೆ ಹಾಗೂ ಕಲ್ಲುಗಳಿಂದ ಮಾರಾಮಾರಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಅಶೋಕನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ರವಾನೆ ಮಾಡಲಾಗಿತ್ತು.ಗಂಭೀರವಾಗಿ ಗಾಯಗೊಂಡಿದ್ದ ಅಶೋಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಅಣ್ಣ-ತಮ್ಮನ ಜಗಳ ಕೊಲೆಯಲ್ಲಿ ಅಂತ್ಯಗೊಂಡಂತಾಗಿದೆ. ಈ ವಿಚಾರವಾಗಿ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಮುಖಂಡರು ಹತ್ತಾರು ಬಾರಿ ಸಂಧಾನ ಸಭೆ ನಡೆಸಿದ್ದರು. ಆದರೆ, ಪ್ರಯೋಜನಕ್ಕೆ ಬಂದಿರಲಿಲ್ಲ. ಪದೇ ಪದೇ ದಾಯಾದಿಗಳ ನಡುವೆ ಜಗಳ ಮುಂದುವರಿದಿದ್ದರಿಂದ ಎಲ್ಲರೂ ಬೇಸತ್ತು ಹೋಗಿದ್ದರು. ಇದೇ ಕಾರಣಕ್ಕೆ ಬುಧವಾರ ಬೆಳಗ್ಗೆ ಖಾಲಿ ಜಾಗೆಯ ಅಳತೆಯ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಅದು ತೀವ್ರಗೊಂಡು ಎರಡು ಗುಂಪುಗಳ ನಡುವೆ ಜಗಳ ನಡೆದು ಕೊನೆಗೆ ಅಶೋಕ ಕಮ್ಮಾರ ಜೀವ ಹೋಗಿದೆ.
ಘಟನೆಯ ಬಳಿಕ ಗಾಯಗೊಂಡಿದ್ದ ಫಕ್ಕೀರಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಫಕ್ಕೀರಪ್ಪ ಗುಣಮುಖನಾದ ಬಳಿಕ ಬಂಧಿಸುವ ಸಾಧ್ಯತೆ ಇದೆ.