ಸಾರಾಂಶ
ಸಮೀಪದ ಚಾಮರಾಜನರ ತಾಲೂಕಿನ ಇರಸವಾಡಿ ಗ್ರಾಮದಲ್ಲಿ ಅಣ್ಣನಿಂದಲೇ ತಮ್ಮನ ಕೊಲೆ ನಡೆದಿರುವ ಆಘಾತಕಾರಿ ಘಟನೆ ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಯಳಂದೂರು: ಸಮೀಪದ ಚಾಮರಾಜನರ ತಾಲೂಕಿನ ಇರಸವಾಡಿ ಗ್ರಾಮದಲ್ಲಿ ಅಣ್ಣನಿಂದಲೇ ತಮ್ಮನ ಕೊಲೆ ನಡೆದಿರುವ ಆಘಾತಕಾರಿ ಘಟನೆ ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇರಸವಾಡಿ ಗ್ರಾಮದ ನಾಗಯ್ಯ (೩೫) ಎಂಬ ವ್ಯಕ್ತಿಯೇ ಮೃತಪಟ್ಟ ದುರ್ದೈವಿ. ಫೆ.೧ ರ ಶನಿವಾರ ಇರಸವಾಡಿ ಗ್ರಾಮದಲ್ಲಿ ನಾಗಯ್ಯ ಎಂಬುವರ ಅಣ್ಣ ಮಹೇಶ್ ಹಾಗೂ ನಿಂಗರಾಜು ಎಂಬುವರು ಜಗಳವಾಡುತ್ತಿದ್ದರು. ಈ ವೇಳೆ ನಾಗಯ್ಯ ಈ ಜಗಳವನ್ನು ಬಿಡಿಸಲು ಹೋದಾಗ ಈತನ ಮೇಲೆ ಇವನ ಅಣ್ಣ ಮಹೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಕ್ಷಣ ಈತನನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಈತ ಸೋಮವಾರ ಮೃತಪಟ್ಟಿದ್ದಾನೆ. ಈ ಸಂಬಂಧ ಮೃತ ನಾಗಯ್ಯನ ಮಡದಿ ಮಂಗಳ ಎಂಬುವರ ದೊಡ್ಡಪ್ಪನ ಮಗ ಉಪ್ಪಿನಮೋಳೆ ಗ್ರಾಮದ ಗೋವಿಂದರಾಜು ದೂರು ದಾಖಲಿಸಿದ್ದು ಮಹೇಶ್ ಪರಾರಿಯಾಗಿದ್ದು ಪೊಲೀಸರು ಈತನಿಗಾಗಿ ಶೋಧ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಡಿವೈಎಸ್‌ಪಿ ಎಂ ಧರ್ಮೇಂದ್ರ, ಸಿಪಿಐ ಕೆ. ಶ್ರೀಕಾಂತ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ವಹಿಸಿದ್ದಾರೆ.